

ಬೆಂಗಳೂರು: ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ರಾಜ್ಯ ಸರ್ಕಾರ ವಂದೇ ಮಾತರಂ ಗೀತೆ ಮಾದರಿಯಲ್ಲಿ ಸ್ಫೂರ್ತಿ ಗೀತೆಯನ್ನಾಗಿ ಘೋಷಿಸಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ್ ಹೇಳಿದರು.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ಸಹಯೋಗದಲ್ಲಿ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ವೃತ್ತದಲ್ಲಿನ ಬಿ.ಎಂ.ಶ್ರೀ. ಪ್ರತಿಮೆ ಎದುರು ಶುಕ್ರವಾರ ಆಯೋಜಿಸಿದ್ದ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆ - 21’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ 1924ರ ಡಿ. 26 ಮತ್ತು 27ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶದಲ್ಲಿ ಸ್ವಾಗತ ಗೀತೆಯಾಗಿ ಅಂದು ಹುಯಿಲಗೋಳ ನಾರಾಯಣ ರಾಯರ ‘ಉದಯವಾಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡಲಾಯಿತು. ಇದು ಕರ್ನಾಟಕದ ಏಕೀಕರಣಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿತು. ಆಗಿನ ಮರಾಠಿ ವಾತಾವರಣದಲ್ಲಿ ಕನ್ನಡತನವನ್ನು ಬಡಿದೆಬ್ಬಿಸಲು ಸ್ಫೂರ್ತಿಯಾಯಿತು ಎಂದು ಸ್ಮರಿಸಿದರು.
ಇದೀಗ ಈ ಗೀತೆಗೆ ನೂರು ವರ್ಷಗಳು ತುಂಬಿದ್ದು, ಇಂದಿಗೂ ಕನ್ನಡಿಗರ ಸ್ವಾಭಿಮಾನದ ಪ್ರತೀಕವಾಗಿಯೇ ಇದೆ. ಹಾಗಾಗಿ ಸರ್ಕಾರ ಈ ಗೀತೆಯನ್ನು ಸ್ಫೂರ್ತಿ ಗೀತೆ ಎಂದು ಘೋಷಿಸಬೇಕು ಎಂದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ. ಚಂದ್ರಶೇಖರ್ ಮಾತನಾಡಿ,
ಕರ್ನಾಟಕ ಏಕೀಕರಣ ಹೋರಾಟದ ಜಾಗೃತಿಗೆ ಮೂಲ ಮಂತ್ರವಾಗಿ ಹೊಸ ಆಯಾಮ ನೀಡಿದ ‘ಉದಯವಾಗಲಿ ನಮ್ಮಚೆಲುವ ಕನ್ನಡ ನಾಡು’ ಗೀತೆಯ ಶತಮಾನೋತ್ಸವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆ, ಸರ್ಕಾರಿ ಕಛೇರಿಗಳಲ್ಲಿ ಒಂದು ನಿಗದಿತ ದಿನ ಹಾಡುವ ಮೂಲಕ ಗೌರವ ಸಲ್ಲಿಸಬೇಕು. ಈ ಕುರಿತು ಸರ್ಕಾರ ಕ್ರಮ ವಹಿಸಬೇಕು ಎಂದರು.
ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ. ಚ. ಚನ್ನೇಗೌಡ ಮಾತನಾಡಿ, ಭಾರತದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು1956ರ ನವೆಂಬರ್ 1ರಂದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಹೊಸ ರಾಜ್ಯದ ಅನಾವರಣಗೊಳಿಸಿದ ಸಂದರ್ಭದಲ್ಲಿ ಪಿ. ಕಾಳಿಂಗರಾಯರು ‘ಉದಯವಾಯಿತು ಚೆಲುವ ಕನ್ನಡ ನಾಡು’ ಎಂದು ಹಾಡಿದ್ದರು. ಅದನ್ನು ವರಕವಿ ದ. ರಾ. ಬೇಂದ್ರೆ ಹಾಗೂ ಅ.ನ.ಕೃಷ್ಣರಾಯರು ವಿರೋಧಿಸಿ ನಮ್ಮ ಕೈ ತಪ್ಪಿರುವ ಭಾಗವೂ ಕರ್ನಾಟಕಕ್ಕೆ ಸೇರುವವರೆಗೆ ‘ಉದಯವಾಗಲಿ ಚೆಲುವ ಕನ್ನಡ ನಾಡು’ ಎಂದೇ ಹಾಡಬೇಕು ಎಂದಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹುಯಿಲಗೋಳ ನಾರಾಯಣರಾಯರ ಮೊಮ್ಮಗಳು, ರಾಷ್ಟ್ರಪ್ರಶಸ್ತಿ ವಿಜೇತೆ ಡಾ. ರಾಧಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಉದಯವಾಗಲಿ ಗಾಯಕ ಆನಂದ ಮಾದಲಗೆರೆ ಗೀತೆಯನ್ನು ಹಾಡಿ ಗೌರವ ಸಲ್ಲಿಸಿದರು. ಇದೇ ವೇಳೆ ಅಗಲಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಾಹಿತಿ ಪ್ರೊ. ಚಂದ್ರಶೇಖರ ನಾದೂರ ಇತರರು ಇದ್ದರು.