

ಕೊಳ್ಳೇಗಾಲ: ಭಾರತೀಯ ಕ್ರೈಸ್ತ ದಿನಾಚರಣೆ ಹಾಗೂ ದ್ವಿತೀಯ ವಾರ್ಷಿಕ ಮಹಾಸಭೆ ಅಂಗವಾಗಿ ತಾಲೂಕು ಕ್ರೈಸ್ತ ಒಕ್ಕೂಟ ವತಿಯಿಂದ ಸೋಮವಾರ ವಿವಿಧ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ಪಟ್ಣಣದ ಐಇಎಲ್‌ಸಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ತಿಮ್ಮರಾಜೀಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.
ಬೇತೆಲ್ ಲೂಥರನ್ ಚರ್ಚ್ ಫಾದರ್ ಜೋಶುವ ಪ್ರಸನ್ನ ಕುಮಾರ್ ಮಾತನಾಡಿ, ತಾಲೂಕು ಕ್ರೈಸ್ತ ಒಕ್ಕೂಟ ವತಿಯಿಂದ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಸಂತೋಷದ ಸಂಗತಿ. ಇದೇ ರೀತಿ ಸಮಾಜ ಸೇವಾ ಕಾರ್ಯಗಳು ನಡೆಯಲಿ ಎಂದು ಆಶಿಸಿದರು.
ಶಿಕ್ಷಣ ಪ್ರತಿ ಮಗುವಿನ ಹಕ್ಕು. ಯಾವ ಮಗುವೂ ಶಿಕ್ಷಣದಿಂದ ದೂರ ಉಳಿಯಬಾರದು. ಈ ನಿಟ್ಟಿನಲ್ಲಿ ಬಡಮಕ್ಕಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡುತ್ತಿರುವುದು ಅವರ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಿದಂತೆ ಆಗುತ್ತದೆ ಎಂದು ಹೇಳಿದರು.
ತಾಲೂಕು ಕ್ರೈಸ್ತ ಒಕ್ಕೂಟ ಅಧ್ಯಕ್ಷ ಅಂತೋಣಿ ದಿನೇಶ್, ಸಹ ಕಾರ್ಯದರ್ಶಿ ಎಚ್.ನಾಗರಾಜು, ಪದಾಧಿಕಾರಿಗಳಾದ ಮಿಲ್ಟನ್ ಕ್ರಿಸ್ಟೋಫರ್, ರಾಬರ್ಟ್, ಉದಯ ಕುಮಾರ್ ಮತ್ತಿತರರಿದ್ದರು.