

ಸಿದ್ದಾಪುರ: ಪಕ್ಷ ಹಾಗೂ ಜಾತಿ ರಹಿತವಾಗಿ ಸಂಘಟನೆ ಮಾಡಿಕೊಂಡು ಸಿದ್ದಾಪುರ ಉತ್ಸವ ಆಚರಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸಿದ್ದಾಪುರ ಉತ್ಸವ ಸಮಿತಿ ಕಾರ್ಯಾಲಯ ಉದ್ಘಾಟಿಸಿ ಹಾಗೂ ಲಾಂಛನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಉತ್ಸವವನ್ನು ಅರ್ಥಪೂರ್ಣವಾಗಿ ನಡೆಸುವ ನಿಟ್ಟಿನಲ್ಲಿ ಅವರವರ ಅನುಭವವನ್ನು, ಸಲಹೆಯನ್ನು ಮುಕ್ತವಾಗಿ ಹಂಚಿಕೊಂಡು ವ್ಯವಸ್ಥಿತವಾಗಿ ನಡೆಸುವಂತಾಗಲಿ. ಉತ್ಸವಕ್ಕೆ ನನ್ನ ಸಂಪೂರ್ಣ ನೀಡುವುದಾಗಿ ಭರವಸೆ ನೀಡಿದರು.
ಉತ್ಸವ ಸಮಿತಿ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಸಿದ್ದಾಪುರ ಉತ್ಸವವನ್ನು ಅದ್ದೂರಿಯಾಗಿ ನಡೆಸಿಕೊಂಡು ಬಂದಿದ್ದು ಫೆ.8 ಹಾಗೂ 9ರಂದು ಈ ವರ್ಷದ ಉತ್ಸವ ನಡೆಯಲಿದೆ. ರಾಜ್ಯಮಟ್ಟದ ಕಲಾವಿದರಿಗಲ್ಲದೆ, ಸ್ಥಳೀಯ ಕಲಾವಿದರಿಗೂ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ. ಅನೇಕ ರೀತಿಯ ಸ್ಪರ್ಧಾ ಕಾರ್ಯಕ್ರಮ ಸಂಘಟಿಸುತ್ತಿದ್ದು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ಪ್ರಥಮ ದಿನದ ಕಾರ್ಯಕ್ರಮದ ಸಾನ್ನಿಧ್ಯವನ್ನು ಧರ್ಮಸ್ಥಳ ಕನ್ಯಾಡಿ ಶ್ರೀರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ವಹಿಸುವರು. ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದಾರೆ. ಹರತಾಳು ಹಾಲಪ್ಪ, ಡಾ.ಕೆ.ಶ್ರೀಧರ ವೈದ್ಯ, ಡಾ.ಶಶಿಭೂಷಣ ಹೆಗಡೆ, ಶ್ರೀನಿವಾಸ ಹೆಬ್ಬಾರ ಮತ್ತಿತರ ಗಣ್ಯರು ಹಾಗೂ ಉತ್ಸವ ಸಮಿತಿ ಗೌರವಾಧ್ಯಕ್ಷ ಉಪೇಂದ್ರ ಪೈ ಉಪಸ್ಥಿತರಿರುವರು. ಉತ್ಸವದ ಎರಡೂ ದಿನ ಸಂಜೆ 6ರಿಂದ 7.30ರ ವರೆಗೆ ಸ್ಥಳೀಯ ಕಲಾವಿದರ ಕಾರ್ಯಕ್ರಮ ನಂತರ ಹೊರಭಾಗಗಳಿಂದ ಬರುವ ಕಲಾವಿದರಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಉತ್ಸವ ಸಮಿತಿ ಪದಾಧಿಕಾರಿಗಳಾದ ಮಂಜುನಾಥ ನಾಯ್ಕ, ವಿಜಯ ಪ್ರಭು, ಅನಿಲ ದೇವನಳ್ಳಿ, ನಾಗರಾಜ ನಾಯ್ಕ, ರವಿ ನಾಯ್ಕ ಜಾತಿಕಟ್ಟಾ, ಸತೀಶ ಹೆಗಡೆ, ಹಾಲಪ್ಪ ಗೌಡರ್, ಜನಾರ್ಧನ ನಾಯ್ಕ, ರವಿ ನಾಯ್ಕ ಹೊಸೂರು, ವಿನಯ ಹೊನ್ನೇಗುಂಡಿ, ವೆಂಕೋಬ, ಹರೀಶ ಗೌಡರ್, ಎಸ್.ಕೆ. ಮೇಸ್ತ ಇತರರಿದ್ದರು.