ಅಧಿಕಾರ ಬಡವರ ಸೇವೆಗೆ ಮುಡುಪಾಗಿರಲಿ

May the power be devoted to the service of the poor
ಬಾಗಲಕೋಟೆ ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನಿಕಟಪೂರ್ವ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ದಂಪತಿಗಳನ್ನು ಸನ್ಮಾನಿಸಲಾಯಿತು. ಜಿಪಂ ಸಿಇಒ ಟಿ. ಭೂಬಾಲನ್, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಮಹಿಳಾ ವತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿದೇಶಕಿ ಅಕ್ಕಮಹಾದೇವಿ ಕೆ.ಎಚ್ ಇದ್ದರು.
Published on

ಬಾಗಲಕೋಟೆ: ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ತಮಗೊದಗಿ ಬಂದ ನೌಕರಿ ಎಂದು ತಿಳಿಯದೇ ಬಡವರ ಸೇವೆಗೆ ಮುಡಪಾಗಿರಲಿ ಎಂಬ ಭಾವನೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ನೆಮ್ಮದಿ ಸಾಧ್ಯ ಎಂದು ನಿಕಟಪೂರ್ವ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲೇ ಸಮಾಜಕ್ಕೆ ಏನಾದರೂ ಒಂದು ಕೊಡುಗೆ ನೀಡುವ ಹಂಬಲ ನನ್ನದಾಗಿದ್ದು, ಅದಕ್ಕೆ ಪೂರಕ ಎಂಬಂತೆ ನನ್ನ ಸಹೋದರನ ಮಾರ್ಗದರ್ಶನದ ಮೇರೆಗೆ ಐಎಎಸ್ ಅಧಿಕಾರಿಯಾಗಲು ಸಾಧ್ಯವಾಯಿತು ಎಂದರು.

ಕರ್ತವ್ಯಕ್ಕೆ ಬಂದಾಗಿನಿಂದ ಸಾಮಾನ್ಯ ಜನರೂ ತಮ್ಮನ್ನು ಸಂದರ್ಶಿಸಲು ಬಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡಿದ ಕಾರ್ಯ ನನಗೆ ತೃಪ್ತಿದಾಯಕವಾಗಿದೆ. ನೊಂದವರ ದೃಷ್ಟಿಯಲ್ಲಿ ಜಿಲ್ಲಾಧಿಕಾರಿಯಂತಾಗಿರದೇ ಅವರಿಗೆ ಸಾಂತ್ವನ ನೀಡುವ ಕೆಲಸವಾಗಬೇಕು. ಅಧಿಕಾರಿ ಎಂದ ಮೇಲೆ ಸರ್ಕಾರದ ಯೋಜನೆಗಳಲ್ಲಿ ಹಾಗೂ ಜನಪ್ರತಿನಿಧಿಗಳ ಕಾರ್ಯಗಳಲ್ಲಿ ವಿಳಂಬವಾಗದೆ ಕಾರ್ಯನಿರ್ವಹಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದ್ದು, ಇಂತಹ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಬಂದೊದಗುವ ಸಂಕಷ್ಟಗಳಿಗೂ ಅಧಿಕಾರಿಗಳು ಸ್ಪಂದಿಸುವ ಕೆಲಸವಾಗಬೇಕು ಎಂದರು.

ಇದಕ್ಕೆ ನಿದರ್ಶನವೆಂಬಂತೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕ ಮುಚ್ಚಳಗುಡ್ಡ ಗ್ರಾಮದಲ್ಲಿ ದಲಿತರಿಗೆ ಕೊಡಮಾಡಲ್ಪಟ್ಟ ಮನೆಗಳಲ್ಲಿ ಬೇರಾರೋ ಅನಧಿಕೃತವಾಗಿ ವಾಸವಾಗಿ ನಿಜ ಮಾಲೀಕರಿಗೆ ಮನೆ ಬಿಟ್ಟುಕೊಡದೇ ಇದ್ದಾಗ ಹಾಗೂ ಹಲವು ಒತ್ತಡಗಳ ಮಧ್ಯೆಯೂ ಧೈರ್ಯದಿಂದ ಅಂತವರಿಗೆ ಮಾಡಿಕೊಟ್ಟ ಕಾರ್ಯ ಇಂದು ಕೂಡ ಆ ಮನೆಯಲ್ಲಿ ವಾಸಿಸಲು ಆಗಮಿಸಿದ ಕುಟುಂಬಗಳು ಸಂತಸ ವ್ಯಕ್ತಪಡಿಸುತ್ತಿವೆ ಎಂದರು.

ಜಿಪಂ ಸಿಇಒ ಟಿ. ಭೂಬಾಲನ್ ಮಾತನಾಡಿ, ಕಲಬುರಗಿಯಲ್ಲಿ ಪ್ರೊಬೇಷನರಿಯಾಗಿ ಕಾರ್ಯನಿರ್ವಹಿಸುತ್ತಿರುವಾಗ ಸುನೀಲ್‌ಕುಮಾರ ಅವರು ಮುನ್ಸಿಪಲ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿಂದ ಅವರ ಪರಿಚಯ ಆರಂಭವಾಗಿ ಬಾಗಲಕೋಟೆ ಜಿಲ್ಲೆಯಲ್ಲಿ ಜೊತೆಗುಡಿ ಕೆಲಸ ಮಾಡಲಾಯಿತು. ಎಲ್ಲ ಕಡೆಗಳಲ್ಲಿ ಸ್ಫೂರ್ತಿದಾಯಕವಾಗಿ ಕೆಲಸ ನಿರ್ವಹಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಎಲ್ಲ ಅನುಭವವನ್ನು ಮಾಡಿಕೊಟ್ಟಿದ್ದಾರೆ.

ಸ್ವೀಪ್ ಚಟುವಟಿಕೆಯಲ್ಲಿ ಪಾಲ್ಗೊಂಡು ನಿರ್ದೇಶನಗಳನ್ನು ನೀಡಿದ್ದಾರೆ. ಅವರು ಮುಂದೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸೇವೆ ಮಾಡುವಂತಾಗಲಿ ಎಂದರು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಸುನೀಲ್‌ಕುಮಾರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುತ್ತಿರುವಾಗ ನಾನು ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದೆ. ಅಂದು ಮಹಾಮಾರಿ ಕರೊನಾದಿಂದ ಹಲವಾರು ಸಮಸ್ಯೆಗಳು ಬಂದೊದಗಿದಾಗ ಅಷ್ಟೇ ಜವಾಬ್ದಾರಿಯಾಗಿ ಕಾರ್ಯನಿರ್ವಹಿಸಿ ಅನೇಕ ರೋಗಿಗಳ ಗುಣಪಡಿಸಿದ ತೃಪ್ತಿ ತಂದಿದ್ದು, ಅದಕ್ಕೆ ಸ್ಫೂರ್ತಿ ಯಾದ ಸುನೀಲ್‌ಕುಮಾರ ಸೇವೆ ಮರೆಯುವಂತಿಲ್ಲ ಎಂದು ಹೇಳಿದರು.

ಉಪವಿಭಾಗಾಧಿಕಾರಿಗಳಾದ ಶ್ವೇತಾ ಬೀಡಿಕರ, ಸಂತೋಷ ಕಾಮಗೌಡ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಕನಿಷ್ಕ, ಮಹಿಳಾ ವತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಬಾದಾಮಿ ತಹಸೀಲ್ದಾರ ಜೆ.ಬಿ. ಮಜ್ಜಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net