

ತರೀಕೆರೆ: ಆರ್ಯ ಈಡಿಗ ಸಮಾಜದವರು ಅಧಿಕ ಸಂಖ್ಯೆಯಲ್ಲಿ ನೆಲೆಸಿರುವ ಕೆ.ಹೊಸೂರು ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆಸಕ್ತಿ ವಹಿಸಿದರೆ ಸರ್ಕಾರದಿಂದ ಹಣ ಮಂಜೂರು ಮಾಡಿಸಿಕೊಡುವ ಜತೆಗೆ ರೋಪ್‌ಲೈನ್‌ನಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತಾಲೂಕು ಕಛೇರಿ ಆವರಣದಲ್ಲಿ ಆರ್ಯ ಈಡಿಗ ಸಮಾಜ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಏರ್ಪಡಿಸಿದ್ದ ಬ್ರಹ್ಮ ಶ್ರೀನಾರಾಯಣ ಗುರುಗಳ 171ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆನಾದಿ ಕಾಲದಿಂದಲೂ ನಿಸ್ವಾರ್ಥದಿಂದ ಸಮಾಜ ಸುಧಾರಣೆಗೆ ಶ್ರಮಿಸಿದವರನ್ನು ದೈವಿಭಾವದಿಂದ ಸ್ಮರಿಸುವ ಕಾರ್ಯ ನಡೆಯುತ್ತಿದೆ. ಈ ದಿಸೆಯಲ್ಲಿ ಕೇರಳದಲ್ಲಿ ಚಳವಳಿ ಮೂಲಕ ಅಸಮಾನತೆ, ಅಸ್ಪಶ್ಯತೆ ವಿರುದ್ಧ ಹೋರಾಡಿ ಹಲವು ಬದಲಾವಣೆಗೆ ಕಾರಣಕರ್ತರಾದ ಬ್ರಹ್ಮ ಶ್ರೀ ಅವರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ, ಜಾತ್ಯಾತೀತಗೊಳಿಸಬೇಕು. ಈ ಮೂಲಕ ಅವರ ತತ್ವಾದರ್ಶ ಪಾಲನೆ ಮಾಡಬೇಕು ಎಂದರು.
ಸಣ್ಣ ಸಮಾಜದಲ್ಲಿ ಒಗ್ಗಟ್ಟು ಜಾಸ್ತಿ. ಮುಂದಿನ ಪೀಳಿಗೆ ಇದನ್ನರಿತು ಒಳ್ಳೆಯ ಮಾರ್ಗದಲ್ಲಿ ಸಾಗಿದರೆ ಸಮಾಜದ ಜತೆ ವೈಯಕ್ತಿಕ ಪ್ರಗತಿ ಸುಲಭ. ಪಟ್ಟಣದಲ್ಲಿ ಆರ್ಯ ಈಡಿಗ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಬೇಡಿಕೆ ಇದೆ. ಸೂಕ್ತ ಜಾಗದ ಮಾಹಿತಿ ನೀಡುವ ಜತೆಗೆ ಅರ್ಜಿ ಸಲ್ಲಿಸಿ ಸತತ ಪ್ರಯತ್ನ ನಡೆಸಿದರೆ ನಿವೇಶನ ಕೊಡಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ತಹಸೀಲ್ದಾರ್ ವಿಶ್ವಜೀತ ಮೆಹತಾ, ಬಿಇಒ ಎಚ್.ಎ.ಪರಶುರಾಮಪ್ಪ, ಗ್ರಾಪಂ ಸದಸ್ಯ ಬಿ.ಎಂ.ಗುರುಮೂರ್ತಿ, ಪ್ರಮುಖರಾದ ಗಜೇಂದ್ರ, ಟಿ.ರಾಘವೇಂದ್ರ, ಕೃಷ್ಣಮೂರ್ತಿ, ಎನ್.ಪ್ರಮೋದ್ ಮತ್ತಿತರರಿದ್ದರು.