

ಅರಕಲಗೂಡು: ರೈತನ ಕೃಷಿ ಬದುಕನ್ನು ನಾಶ ಮಾಡಿದ ಅಂತಾರಾಷ್ಟ್ರೀಯ ಶಕ್ತಿಗಳನ್ನು ಮೆಟ್ಟಿ ನಿಲ್ಲಲು ರೈತ ಚಳವಳಿ ಮರಳಿ ಬಲಗೊಳ್ಳುವ ಅಗತ್ಯವಿದೆ ಎಂದು ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಕೆ.ಸಿ. ಬಸವರಾಜ್ ಅಭಿಪ್ರಾಯಪಟ್ಟರು.
ದಸರಾ ಉತ್ಸವದ ಪ್ರಯುಕ್ತ ಪಟ್ಟಣದ ಗಣಪತಿ ಕೊತ್ತಲು ಉದ್ಯಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ರೈತ ದಸರಾ ಉದ್ಘಾಟಿಸಿ ಮಾತನಾಡಿ, ಶೇ.93ರಷ್ಟಿದ್ದ ಕೃಷಿಕರನ್ನು ಆಡಳಿತಾರೂಢ ಸರ್ಕಾರಗಳು ಅಲಕ್ಷೃ ಮಾಡಿ ಅಭಿವೃದ್ಧಿ ಹೆಸರಿನಲ್ಲಿ ಕೈಗಾರಿಕೆಗಳ ಬೆನ್ನು ಬಿದ್ದ ಪರಿಣಾಮ ಕೃಷಿ ಕ್ಷೇತ್ರ ಬಡವಾಗಿದೆ. ರೈತರ ಬದುಕು ಹೀನಾಯ ಸ್ಥಿತಿ ತಲಪಿದೆ. ರೈತರು 80ರ ದಶಕದಲ್ಲಿ ಚಳವಳಿಗೆ ಇಳಿದಾಗ ಬೆದರಿದ ಸರ್ಕಾರ ಚಳುವಳಿ ಹತ್ತಿಕ್ಕಲು ರೈತರ ಮೇಲೆ ಗುಂಡು ಹಾರಿಸಿತು. 90ರ ದಶಕದಲ್ಲಿ ಗ್ಯಾಟ್ ಒಪ್ಪಂದವಾದ ಬಳಿಕ ಅಂತಾರಾಷ್ಟ್ರೀಯ ಶಕ್ತಿಗಳು ಕೃಷಿಯನ್ನು ವ್ಯಾಪಾರೀಕರಣಗೊಳಿಸುವ ಮೂಲಕ ಕೃಷಿಯ ಮೇಲಿನ ರೈತರ ಹಕ್ಕನ್ನು ನಾಶಗೊಳಿಸಿ ರೈತರನ್ನು ಭಿಕ್ಷುಕರನ್ನಾಗಿಸಿದೆ. ರೈತರು ಉತ್ತಮ ಬದುಕಿಗಾಗಿ ಮತ್ತೊಮ್ಮೆ ಹೋರಾಟದ ಹಾದಿ ಹಿಡಿಯುವುದು ಅನಿವಾರ್ಯ ಎಂದರು.
ಹಾಸನ ಆಕಾಶವಾಣಿ ಪ್ರಸಾರ ವಿಭಾಗದ ಎ.ವಿ.ಮಧುಸೂದನ್ ಮಾತನಾಡಿ, ಕೃಷಿಯ ಪರಿಭಾಷೆ ಬದಲಾಗಿದೆ ಆದರೆ ರೈತರ ಬದುಕು ಬದಲಾಗಿಲ್ಲ, ಬೆಳೆದ ಬೆಳೆಗೆ ಸರಿಯಾದ ಬೆಲೆ ಪಡೆಯಲು ಸಾಧ್ಯವಾಗುತ್ತಿಲ್ಲ, ಹೆಚ್ಚಿನ ವೆಚ್ಚ ಬೇಡುವ ಆಹಾರದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗದೆ ವಾಣಿಜ್ಯ ಬೆಳೆಯತ್ತ ರೈತರು ಚಿತ್ತ ಹರಿಸಿದ್ದರೂ ನೆಮ್ಮದಿಯ ಬದುಕು ಕಂಡುಕೊಳ್ಳಲಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ದೊಡ್ಡಮಠದ ಮಠಾಧೀಶ ಮಲ್ಲಿಕಾರ್ಜುನ ಸ್ವಾಮೀಜಿ, ಅರೆ ಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಪೀಠದ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ದಸರಾ ಉತ್ಸವ ಸಮಿತಿ ಕಾರ್ಯದರ್ಶಿ ರವಿಕುಮಾರ್, ರೈತ ಸಂಘದ ಗೌರವಾಧ್ಯಕ್ಷ ಭುವನೇಶ್ ಮಾತನಾಡಿದರು.
2023-24ನೇ ಸಾಲಿನ ಸಮಗ್ರ ಕೃಷಿಯಲ್ಲಿ ಜಿಲ್ಲಾ ಮಟ್ಟದ ಉತ್ತಮ ರೈತ ಪ್ರಶಸ್ತಿ ಪಡೆದ ತಾಲೂಕಿನ ಹೊಡೆನೂರು ಗ್ರಾಮದ ಚಿಕ್ಕೇಗೌಡ ಅವರನ್ನು ಸನ್ಮಾನಿಸಲಾಯಿತು. ಹೋರಿಗಳು, ಮಿಶ್ರತಳಿ ಕರುಗಳು, ಕುರಿಗಳು ಹಾಗೂ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ 105 ಪ್ರಾಣಿಗಳು ಭಾಗವಹಿಸಿದ್ದವು. ಹೊನ್ನವಳ್ಳಿ ಗ್ರಾಮದ ಈಶ್ವರ ಅವರ ಜೋಡಿ ಎತ್ತುಗಳು ಪ್ರಥಮ ಹಾಗೂ ಇದೇ ಗ್ರಾಮದ ಅಜಿತ್ ಅವರ ಎತ್ತುಗಳು ದ್ವಿತೀಯ ಹಾಗೂ ಹನ್ಯಾಳು ಗ್ರಾಮದ ಪ್ರಮೋದ್ ಅವರ ಎತ್ತುಗಳು ತೃತೀಯ ಬಹುಮಾನ ಪಡೆದವು. ಕೊಣನೂರು ಹೋಬಳಿ ಸಬ್ಬತ್ತಿ ಗ್ರಾಮದ ವಾಜಿದ್ ಬೇಗ್ ಅವರ ಟಗರುಗಳು ಪ್ರಥಮ ಬಹುಮಾನ ಗಳಿಸಿತು.
ಪಪಂ ಉಪಾಧ್ಯಕ್ಷ ಸುಬಾನ್ ಷರೀಪ್, ತಹಸೀಲ್ದಾರ್ ಕೆ.ಸಿ. ಸೌಮ್ಯಾ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಎ.ಡಿ.ಶಿವರಾಮ್, ಸಹಾಯಕ ಕೃಷಿ ನಿರ್ದೇಶಕರಾದ ಕೆ.ಜಿ.ಕವಿತಾ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ರಾಜೇಶ್, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮ್ ಭಟ್, ಮುಖಂಡ ನರಸೇಗೌಡ, ದಸರಾ ಸಮಿತಿ ಸದಸ್ಯರಾದ, ಕಿಶೋರ್, ಮೋಹನ್, ಭಾಸ್ಕರ್, ರಘು, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಜಗದೀಶ್, ತಾಲೂಕು ಅಧ್ಯಕ್ಷ ದಿನೇಶ್, ಮುಖಂಡರಾದ ಹೊಂಬೇಗೌಡ, ಕೃಷ್ಣೇಗೌಡ, ರವಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಬನ್ನಿ ಮಂಟಪದಿಂದ ಕಾರ್ಯಕ್ರಮದ ವೇದಿಕೆವರೆಗೆ ನಡೆದ ಎತ್ತಿನ ಗಾಡಿ ಜಾಥಾಕ್ಕೆ ಶಾಸಕ ಎ. ಮಂಜು ಚಾಲನೆ ನೀಡಿದರು.