

ಚಳ್ಳಕೆರೆ: ಜನಸಾಮಾನ್ಯರಲ್ಲಿ ದೇಶಾಭಿಮಾನ ಹೆಚ್ಚಬೇಕು. ಈ ಕಾರ್ಯ ಮಾಡಲು ಕೇಂದ್ರ ಸರ್ಕಾರ ‘ನನ್ನ ಮಣ್ಣು-ನನ್ನ ದೇಶ’ ಎನ್ನುವ ಕಾರ್ಯಕ್ರಮ ಜಾರಿ ಮಾಡಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಗರಸಭೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ಸೇರಿ ರಾಷ್ಟ್ರೀಯ ಹಬ್ಬಗಳ ಸಂಭ್ರಮ ಜನಮನದಲ್ಲಿ ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ಮಡಿದವರ ಬದುಕಿನ ಆದರ್ಶ ಸಮಾಜಕ್ಕೆ ಮಾದರಿಯಾಗಬೇಕು. ದೇಶಕ್ಕಾಗಿ ಕಷ್ಟಗಳನ್ನು ಎದುರಿಸಿ ಸೇವೆ ಮಾಡುವ ಸೈನಿಕರನ್ನು ಸ್ಮರಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಅಭಿನಂದನೆ: ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಎಚ್.ತಿಮ್ಮಣ್ಣ, ಗೋವಿಂದರೆಡ್ಡಿ, ಮುಸ್ತಹಮ್ಮದ್, ಮಂಜುನಾಥ, ಕರಿಯಣ್ಣ, ಮಧು ಬಾಲೇನಹಳ್ಳಿ, ಮಧುಸೂದನ, ಬೋರಣ್ಣ, ಜಯಣ್ಣ ಇವರನ್ನು ಸನ್ಮಾನಿಸಲಾಯಿತು.
ನಗರಸಭೆ ಸದಸ್ಯರಾದ ಸುಮಕ್ಕ, ಸಾವಿತ್ರಮ್ಮ, ಕವಿತಾ, ಸುಮಾ, ಪ್ರಾಚಾರ್ಯ ಡಾ.ಆರ್.ರಂಗಪ್ಪ, ಪೌರಾಯುಕ್ತ ಸಿ.ಚಂದ್ರಪ್ಪ, ಎಚ್.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.