

ಹುಣಸೂರು: ತಾಲೂಕಿನಲ್ಲಿ ನರೇಗಾ ಯೋಜನೆ ಪ್ರಸ್ತುತ ಸಾಲಿಗೆ ಶೇ. 20ರಷ್ಟು ಮಾತ್ರ ಸದುಪಯೋಗವಾಗಿದ್ದು, ವಿವಿಧ ಇಲಾಖೆಗಳು ಯೋಜನೆಯ ಸಂಪೂರ್ಣ ಬಳಕೆಯತ್ತ ಗಮನಹರಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ಕೆ.ಮನು ಸೂಚಿಸಿದರು
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಡಳಿತಾಧಿಕಾರಿ ಸಿದ್ದಗಂಗಮ್ಮ ನೇತೃತ್ವದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ಪ್ರಸ್ತುತ ಸಾಲಿಗಾಗಿ ಒಟ್ಟು 1,58,173 ಮಾನವ ದಿನ ಸೃಜನೆ ಆಗಬೇಕಿದೆ. ಆದರೆ ಈವರೆಗೆ ಕೇವಲ 33, 147(ಶೇ.20)ಮಾನವ ದಿನ ಸೃಜನೆಯ ಗುರಿ ಮುಟ್ಟಲಾಗಿದೆ. ಕೃಷಿ ಇಲಾಖೆಯಲ್ಲಿ ಶೇ.9, ತೋಟಗಾರಿಕೆ ಶೇ.17.87, ಸಾಮಾಜಿಕ ಅರಣ್ಯ ಶೇ.56, ರೇಷ್ಮೆ ಶೇ.25.95ರಷ್ಟು ಸಾಧನೆ ಮಾಡಿವೆ. ಮೀನುಗಾರಿಗೆ, ಕುಡಿಯುವ ನೀರು, ಕೆ.ಆರ್.ನಗರ ವಿಭಾಗ ಮತ್ತು ಮೈಸೂರು ವಿಭಾಗದ ಪಿಆರ್‌ಇಡಿ ಇಲಾಖೆಗಳಿಂದ ಶೂನ್ಯ ಸಾಧನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ತಂಬಾಕು ತಟಾವು ಮುಗಿದ ಬಳಿಕ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳ ಮುಖ್ಯಸ್ಥರು ನರೇಗಾ ಯೋಜನೆಯ ಸಮರ್ಪಕ ನಿರ್ವಹಣೆ ಮತ್ತು ಸದುಪಯೋಗದತ್ತ ಗಮನಹರಿಸಿ ಶೇ.100ರ ಸಾಧನೆಗೆ ಮುಂದಾಗಬೇಕು ಎಂದು ನಿರ್ದೇಶನ ನೀಡಿದರು.
ಹಾಡಿಗಳಿಗೆ ತಲುಪದ ಗ್ಯಾರಂಟಿ ಸ್ಕೀಂ: ಪರಿಶಿಷ್ವ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜು ಇಲಾಖೆಯ ಪ್ರಗತಿ ಕಾರ್ಯಕ್ರಮಗಳ ಮಾಹಿತಿ ನೀಡಿ, ತಾಲೂಕಿನ 33 ಗಿರಿಜನ ಹಾಡಿಗಳಲ್ಲಿ ಆದಿವಾಸಿ ಕುಟುಂಬಗಳ ಆಧಾರ್ ಕಾರ್ಡ್ ಮೊಬೈಲ್ ಸಂಖ್ಯೆಗಳು ಲಿಂಕ್ ಆಗದ ಕಾರಣ ಸರ್ಕಾರದ ಗೃಹಜ್ಯೋತಿ, ಗೃಹಲಕ್ಷ್ಮೀ ಗ್ಯಾರಂಟಿ ಯೋಜನೆಗಳು ತಲುಪಿಲ್ಲ. ತಾಲೂಕಿನಲ್ಲಿ 3,850ಕ್ಕೂ ಹೆಚ್ಚು ಗಿರಿಜನ ಕುಟುಂಬಗಳಿದ್ದು, 500ಕ್ಕೂ ಹೆಚ್ಚು ಕುಟುಂಬಗಳ ಆಧಾರ್ ಕಾರ್ಡ್ ತಿದ್ದುಪಡಿ ಆಗಿಲ್ಲ. ಪ್ರತಿ ಶುಕ್ರವಾರ ಹಾಡಿಗಳಲ್ಲಿ ಶಿಬಿರ ಆಯೋಜಿಸಿ ಆಧಾರ್ ಕಾರ್ಡ್‌ಗೆ ಮೊಬೈನ್ ಸಂಖ್ಯೆ ಜೋಡಣೆ ಮಾಡುವ ಕಾರ್ಯ ನಡೆದಿದೆ. ಗಿರಿಜನರೂ ನಮಗೆ ಸಹಕರಿಸುವ ಅವಶ್ಯಕತೆಯಿದೆ. ವಿವಿಧ ಇಲಾಖೆಗಳೂ ಸಹಕಾರ ನೀಡಬೇಕು ಎಂದರಲ್ಲದೆ, ಸೆಸ್ಕ್‌ಗೆ ಗಿರಿಜನರಿಂದ ಬರಬೇಕಿದ್ದ ಬಾಕಿ ಹಣವನ್ನು ಪಾವತಿಸಿದ್ದೇವೆ. ಹೀಗಿದ್ದೂ ಹಾಡಿಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ ಎಂದು ದೂರಿದರು.
ಈ ಕುರಿತು ಪ್ರತಿಕ್ರಿಯಿಸಿದ ಇಒ ಎರಡೂ ಇಲಾಖೆಗಳ ಅಧಿಕಾರಿಗಳು ಚರ್ಚಿಸಿ ಹೊಂದಾಣಿಕೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಗ್ರಾ.ಪಂ.ಗಳಿಂದ 31 ಕೋಟಿ ರೂ.ಬಾಕಿ: ಸೆಸ್ಕ್ ಎಇಇ ಸಿದ್ದಪ್ಪ ಮಾತನಾಡಿ, ಗ್ರಾ.ಪಂ.ಗಳ ಕುಡಿಯುವ ನೀರು ಮತ್ತು ಬೀದಿದೀಪಗಳ ವಿದ್ಯುತ್ ಬಳಕೆಯ ಒಟ್ಟು 31 ಕೋಟಿ ರೂ. ಬಾಕಿ ಬರಬೇಕಿದೆ. ಶುಲ್ಕ ಪಾವತಿಸದೆ ಕುಳಿತರೆ ವಿದ್ಯುತ್ ಪೂರೈಕೆ ಮಾಡುವುದಾದರೂ ಹೇಗೆ? ಈ ಕುರಿತು ಗ್ರಾ.ಪಂಗಳಿಗೆ ನಿರ್ದೇಶನ ನೀಡಬೇಕೆಂದು ಇಒಗೆ ಒತ್ತಾಯಿಸಿದರು.
ನಾಗಪುರ ಗಿರಿಜನ ಪುನರ್ವಸತಿ ಕೇಂದ್ರ ವ್ಯಾಪ್ತಿಯ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆಯಿಲ್ಲದೆ ತೊಂದರೆಯಾಗಿದೆ. ಶಾಲೆಯ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಕ್ಷೇತ್ರಶಿಕ್ಷಣಾಧಿಕಾರಿ ರೇವಣ್ಣ ಕೋರಿದರು. ಕೆಎಸ್‌ಆರ್‌ಟಿಸಿ ಹುಣಸೂರು ಡಿಪೋ ಎಡಿಎಸ್ ರಾಜೇಶ್ವರಿ ಬಸ್ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು.
ಸಭೆಯಲ್ಲಿ ತಾ.ಪಂ.ಯೋಜನಾ ಅಧಿಕಾರಿ ರಾಜೇಶ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.