

ಮದ್ದೂರು: ಪಟ್ಟಣದ ಹಲವು ಬಡಾವಣೆಗಳಲ್ಲಿ ಮುರಿದು ಬಿದ್ದಿರುವ ಹಾಗೂ ಇಲ್ಲದಿರುವ ಕಡೆಗಳಲ್ಲಿ ನಾಮಫಲಕ ಅಳವಡಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ಸೂಚಿಸಿದರು.
ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಸೋಮವಾರ ಪುರಸಭಾಧ್ಯಕ್ಷೆ ಕೋಕಿಲಾ ಅರುಣ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತುರ್ತು ಸಭೆಯಲ್ಲಿ ಮಾತನಾಡಿದರು. ನಾಮಫಲಕಗಳು ಎಷ್ಟೋ ಕಡೆ ಹಾಳಾಗಿರುವುದರ ಜತೆಗೆ ಮುರಿದು ಬಿದ್ದಿದೆ ಎಂದು ಸದಸ್ಯೆ ಸರ್ವಮಂಗಳಾ ಸಭೆಯ ಗಮನ ಸೆಳೆದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿಗೆ ಶಾಸಕರು ತಾಕೀತು ಮಾಡಿದರು.
ಪುರಸಭಾ ಮುಖ್ಯಾಧಿಕಾರಿ ಮೀನಾಕ್ಷಿ ಮಾತನಾಡಿ, ಕೂಡಲೇ ಈ ಸಂಬಂಧ ಟೆಂಡರ್ ಕರೆದು ಕ್ರಮವಹಿಸುವುದಾಗಿ ಸಭೆಗೆ ತಿಳಿಸಿದರು.
ಪಟ್ಟಣದ ಶಿವಪುರದ ಕೊಪ್ಪ ವೃತ್ತದಲ್ಲಿ ಚರಂಡಿ ನೀರು ನಿಂತಲ್ಲೇ ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಪುರಸಭೆಯ ಬೇರೆ ಹಣದಲ್ಲಿ ಚರಂಡಿ ಕಾಮಗಾರಿ ಮಾಡಿ ಸಮಸ್ಯೆಯನ್ನು ಬಗೆಹರಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಪ್ಪ ಹಾಗೂ ಕೊಲ್ಲಿ ವೃತ್ತಗಳಲ್ಲಿ ಹೈಮಾಸ್ಟ್ ವಿದ್ಯುತ್ ದೀಪಗಳು ಕೆಟ್ಟಿರುವ ಹಾಗೂ ಪಟ್ಟಣದ ವ್ಯಾಪ್ತಿಯ ಉದ್ಯಾನಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಸದಸ್ಯರು ಸಭೆಯ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಕೂಡಲೇ ಸಮಸ್ಯೆ ಸರಿಪಡಿಸುವುದಾಗಿ ಮುಖ್ಯಾ ಧಿಕಾರಿ ಭರವಸೆ ನೀಡಿದರು.
ಪುರಸಭಾಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದರಾಜು, ಮುಖ್ಯಾಧಿಕಾರಿ ಮೀನಾಕ್ಷಿ ಇತರರಿದ್ದರು.