

ಕೊಳ್ಳೇಗಾಲ: ಕಣಿಯರ್ ಸಮುದಾಯದ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಆಯೋಜಿಸಿರುವ ಸನ್ಮಾನ ಕಾರ್ಯಕ್ರಮ ಅತ್ಯಂತ ಪ್ರೋತ್ಸಾಹದಾಯಕವಾದದ್ದು. ಮಹಾನ್ ವ್ಯಕ್ತಿಗಳ ಸಂದೇಶ ಮಕ್ಕಳಿಗೆ ಕೀರ್ತಿ, ಯಶಸ್ಸು ತರುವ ಮಾರ್ಗವಾಗಲಿ ಎಂದು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ಆಶಿಸಿದರು.
ಪಟ್ಟಣದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಶ್ರೀ ಬಿ.ಸಿ.ರಂಗಪ್ಪ ವಿದ್ಯಾನಿಧಿ ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಕಣಿಯರ್ ಜನಾಂಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಇಂತಹ ಕಾರ್ಯಕ್ರಮ ಹೆಚ್ಚೆಚ್ಚು ನಡೆಯಬೇಕು ಎಂದರು.
ಶ್ರೀ ಕ್ಷೇತ್ರ ಮೇಲುಕೋಟೆಯ ಯತಿರಾಜ ದಾಸನ್ ಮಠದ ಗೃಹಸ್ಥ ಪೀಠಾಧಿಪತಿ ಶ್ರೀ ಶ್ರೀನಿವಾಸ ನರಸಿಂಹನ್ ಗುರೂಜಿ ಮಾತನಾಡಿ, ರಾಮಾನುಜಾಚಾರ್ಯರ ಕಾಲದಿಂದಲೂ ಕಣಿಯ ಸಮುದಾಯದವರಿಗೆ ಧಾರ್ಮಿಕ ಆಶೀರ್ವಾದವಿದೆ. ಈ ಜನಾಂಗದ ಮೂಲ ಉದ್ದೇಶ ಜ್ಯೋತಿಷ್ಯ ಮತ್ತು ಆಯುರ್ವೇದ. ಇವೆರಡೂ ಮನುಷ್ಯನ ಜೀವನದ ಬೆಳವಣಿಗೆಗೆ ಆಧಾರ ಎಂದರು.
ಜ್ಯೋತಿಷ್ಯ ಮತ್ತು ಆಯುರ್ವೇದ ಪರಂಪರೆಯನ್ನು ಮುಂದಿನ ಜನಾಂಗದ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯಕ್ರಮಗಳಾಗಬೇಕು. ಈ ಸಮುದಾಯ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಸಬಲವಾಗಬೇಕಿದೆ ಎಂದು ಹೇಳಿದರು.
ಜನಾಂಗವನ್ನು ಸಮಾಜಮುಖಿಯಾಗಿ ಕೊಂಡೊಯ್ಯಲು ಸಮುದಾಯದ ಶಾಸಕರಾಗಲೀ ಅಥವಾ ಮಂತ್ರಿಗಳಾಗಲಿ ಇಲ್ಲ. ಆದ್ದರಿಂದ ನಾವೇ ನಮ್ಮ ಸಮಸ್ಯೆಗಳಿಗೆ ಶಾಸಕರಾಗಿ, ಮಂತ್ರಿಗಳಾಗಿ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಂಘಟಿತರಾಗಬೇಕಾಗಿದೆ ಎಂದರು.
ಮುಖಂಡ ಶೆಲ್ವೆ ಪಿಳ್ಳೆ ಅಯ್ಯಂಗಾರ್ ಮಾತನಾಡಿದರು. ಕೊಳ್ಳೇಗಾಲದಲ್ಲಿ ವಿದ್ಯಾಭ್ಯಾಸ ಮುಗಿಸಿ ಉನ್ನತ ಮಟ್ಟದಲ್ಲಿರುವ ಪ್ರಮುಖ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರಮೀಳಾ, ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯ ವೈದ್ಯೆ ಶಶಿಕಲಾ, ಕೊಡಗು ಜಿಲ್ಲೆಯ ಡಾ.ಹರಿಕೃಷ್ಣ ಪಣಾಜೆ, ಡಾ.ಲಕ್ಷ್ಮೀನಾರಾಯಣ್, ಕೊಳ್ಳೇಗಾಲ ತಾಲೂಕು ಕಣಿಯನ್ ಸೇವಾ ಸಂಘದ ಅಧ್ಯಕ್ಷ ರಂಗಸ್ವಾಮಿ ಸುರಾಪುರ, ಅನಿತಾ ಟ್ರಾವೆಲ್ಸ್ ಮಾಲೀಕ ಸೋಮಶೇಖರ್, ನಗರಸಭಾ ಸದಸ್ಯೆ ರಮ್ಯಾ ಮಹೇಶ್ ಸೇರಿದಂತೆ ಅನೇಕರನ್ನು ಗೌರವಿಲಾಯಿತು.
ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಬಳಿಕ ಜನಾಂಗದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ಗಣ್ಯರು ವಿತರಣೆ ಮಾಡಿದರು.
ಬಿ.ಸಿ.ರಂಗಪ್ಪ ವಿದ್ಯಾ ನಿಧಿ ಟ್ರಸ್ಟ್ ಅಧ್ಯಕ್ಷ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್, ಸದಸ್ಯ ಸತೀಶ್ ಕುಮಾರ್, ಕೊಳ್ಳೇಗಾಲ ತಾಲೂಕು ಕಣಿಯೆನ್ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೆಂಡರಹಳ್ಳಿ ಶಿವಕುಮಾರ್, ಪ್ರದೀಪ್ ಕುಮಾರ್ ಮತ್ತಿತರರಿದ್ದರು.