

ಚಿಕ್ಕೋಡಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನ ಮೇರೆಗೆ
ಜು. 1ರಿಂದ ಸೆಪ್ಟಂಬರ್ 30ರ ವರೆಗೆ ದೇಶಕ್ಕಾಗಿ ಮಧ್ಯಸ್ಥಿಕೆ 90 ದಿನಗಳ ಅಭಿಯಾನವನ್ನು ಚಿಕ್ಕೋಡಿಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ತಾರಕೇಶ್ವರಗೌಡ ಪಾಟೀಲ ಹೇಳಿದರು.
ಇಲ್ಲಿನ ಜಿಲ್ಲಾ ನ್ಯಾಯಾಲಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಕ್ಕೋಡಿ ನ್ಯಾಯಾಲಯಗಳಲ್ಲಿ ಒಟ್ಟು 5 ಜನ ಮಧ್ಯಸ್ಥಿಕೆದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಿಗೆ ಅರ್ಹವಿರುವ ಪ್ರಕರಣಗಳನ್ನು ನ್ಯಾಯಾಧೀಶರು ಗುರುತಿಸಿ ಮಧ್ಯಸ್ಥಿಕೆಗಾಗಿ ಕಳುಹಿಸಿಕೊಡುತ್ತಾರೆ ಎಂದರು.
ಕಕ್ಷಿದಾರರು ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ರಾಜಿ ಸಂಧಾನಕ್ಕೆ ಇಚ್ಛಿಸಿದಲ್ಲಿ ಸಂಬಂಧಪಟ್ಟ ವಕೀಲರು ಅಥವಾ ನ್ಯಾಯಾಧೀಶರ ಗಮನಕ್ಕೆ ತರಬೇಕು. ಮಧ್ಯಸ್ಥಿಕಾ ಕೇಂದ್ರದಲ್ಲಿ ಉಭಯ ಪಕ್ಷಗಾರರು ರಾಜಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಸಾರ್ವಜನಿಕರು ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಹರೀಶ ಪಾಟೀಲ, ಪ್ರಧಾನ ದಿವಾಣಿ ನ್ಯಾಯಾಧೀಶರಾದ ತೃಪ್ತಿ ಧರಣೆ, ಜಹೀರ್ ಅತನೂರ, 1ನೇ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಕಲ್ಮೇಶ ಕಿವಡ, ವಕೀಲರ ಸಂಘದ ಕಾರ್ಯದರ್ಶಿ ಆರ್.ಬಿ. ಹಿತ್ತಲಮನಿ, ಸರ್ಕಾರಿ ಅಭಿಯೋಜಕ ವೈ.ಜಿ. ತುಂಗಳ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಬಿ. ಇತರರಿದ್ದರು.