ವಿಜಯಪುರ : ಪತ್ರಿಕೆ ವಿತರಕರ ಜೀವನ ಹಸನಾಗಲಿ

Press-bjp4
ವಿಜಯಪುರ ನಗರದ ಜಿಪಂ ಆವರಣದಲ್ಲಿರುವ ಹೊಸ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾ ವಿತರಕರ ದಿನಾಚರಣೆ ಅಂಗವಾಗಿ ೧೦ ಜನ ಪತ್ರಿಕಾ ವಿತರಕರನ್ನು ಸನ್ಮಾನಿಸಲಾಯಿತು. ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಬಾಬು ಮಂಗಾನವರ, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ ಇತರರಿದ್ದರು.
Published on

ವಿಜಯಪುರ : ಕೊರೆವ ಚಳಿಯಿರಲಿ, ಧಾರಾಕಾರ ಮಳೆ ಒತ್ತಟ್ಟಿಗಿರಲಿ, ಸಂಬAಽಕರ ಮನೆಯಲ್ಲಿ ಕಹಿ-ಸಿಹಿ ಘಟನೆ ನಡೆದರೂ ಅವರ ಕಾಯಕ ಮಾತ್ರ ನಿರಂತರ. ಅವರೇ ನಿತ್ಯ ಮನೆ, ಮನಕ್ಕೂ ತಾಜಾ ಸುದ್ದಿಗಳ ಹೂರಣವುಳ್ಳ ಪತ್ರಿಕೆಗಳನ್ನು ತಲುಪಿಸುವ ಪತ್ರಿಕಾ ವಿತರಕರು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹೇಳಿದರು.

ನಗರದ ಜಿಪಂ ಆವರಣದಲ್ಲಿರುವ ಪತ್ರಿಕಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಿಕೆ ವಿತರಕರು ಆಯಾ ಪತ್ರಿಕೆಗಳ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದರೆ. ಆದರೆ ಕರೊನಾದಂಥ ಸಂಕಷ್ಟ ಸಮಯದಲ್ಲಿ ಒಲ್ಲದ ಮನಸ್ಸಿನಿಂದ ಪೊಲೀಸರ ಲಾಠಿ ರುಚಿ ಸವಿಯುತ್ತಲೇ ಮನೆ, ಮನೆಗೂ ಪತ್ರಿಕೆ ವಿತರಿಸುವ ಮೂಲಕ ಕರೊನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಹಿಸಿದ ಪತ್ರಿಕಾ ವಿತರಕರ ಕಾರ್ಯ ಅವಿಸ್ಮರಣೀಯವಾದುದು ಎಂದರು.

ನೂರೆಂಟು ಕಷ್ಟಗಳಿದ್ದರೂ, ಹೊರಗೆ ತೋರ್ಪಡಿಸದೆ ನಸುಕಿನ ಜಾವ ಬೇಗ ಎದ್ದು, ಪ್ರತಿಯೊಬ್ಬರಿಗೂ ಪತ್ರಿಕೆಗಳ ಮೂಲಕ ಪ್ರಚಲಿತ ಘಟನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಅವರ ಭವಿಷ್ಯ ಸುಧಾರಣೆಯಾಗಲಿ ಎಂದು ಆಶಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ವಿಶೇಷ ಆಹ್ವಾನಿತೆ ಕೌಶಲ್ಯಾ ಪನಾಳಕರ ಮಾತನಾಡಿ, ಪತ್ರಿಕೆಯೊಂದರ ಸಂಪಾದಕಿಯಾಗಿರುವ ನನಗೆ ಪತ್ರಿಕಾ ವಿತರಕರ ಕಷ್ಟ-ಕಾರ್ಪಣ್ಯಗಳ ಸಂಪೂರ್ಣ ಅರಿವಿದೆ. ಆದಾಗ್ಯೂ ಧೃತಿಗೆಡದೆ ನಿತ್ಯ ಪತ್ರಿಕೆಗಳನ್ನು ತಲುಪಿಸುವ ವಿತರಕರ ಕಾರ್ಯ ಪ್ರಶಂಸನೀಯ ಎಂದರು.

ರಮೇಶ ವಿಟ್ಲಾಪುರ ಮಾತನಾಡಿ, ಹಲವಾರು ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕೆ ವಿತರಕರು ಎದುರಿಸುತ್ತಿರುವ ತಾಪತ್ರಯಗಳಿಗೆ ಲೆಕ್ಕವಿಲ್ಲ. ಆದರೆ ಅವುಗಳನ್ನೆಲ್ಲ ಮೆಟ್ಟಿ ನಿಂತು ಜನರಿನ್ನೂ ನಿದ್ರೆಯ ಮಂಪರಿನಲ್ಲಿದ್ದಾಗಲೇ ಅವರ ಮನೆಗೆ ಪತ್ರಿಕೆ ತಲುಪಿಸುವ ಕಾರ್ಯ ಶ್ರೇಷ್ಠವಾದುದು ಎಂದು ಬಣ್ಣಿಸಿದರು. ವಿತರಕರ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ನಿಟ್ಟಿನಲ್ಲಿ ವಿತರಕರೆಲ್ಲ ಸಂಘಟಿತರಾಗಿ, ತಮ್ಮ ಹಕ್ಕುಗಳಿಗೆ ಹೋರಾಟ ರೂಪಿಸಬೇಕೆಂದರು.

ಇದೇ ವೇಳೆ ೧೦ ಜನ ಪತ್ರಿಕಾ ವಿತರಕರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಈಚೆಗೆ ಕೊನೆಯುಸಿರೆಳೆದ ಮುದ್ದೇಬಿಹಾಳ ಪಟ್ಟಣದ ಪತ್ರಿಕಾ ವಿತರಕ ಎಸ್.ಬಿ. ಕತ್ತಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಲಾಯಿತು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ ಪಿ. ಕುಲಕರ್ಣಿ, ಕಾರ್ಯದರ್ಶಿ ಅವಿನಾಶ ಬಿದರಿ, ಖಜಾಂಚಿಗಳಾದ ರಾಹುಲ ಆಪ್ಟೆ, ದೀಪಕ ಶಿಂತ್ರೆ, ಸಂಘದ ಸದಸ್ಯ ಸಂಜು ಅಕ್ಕಿ, ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷ ಬಾಬು ಮಂಗಾನವರ, ಈರಣ್ಣ ಅವಟಿ, ಬಸವರಾಜ, ವಿತರಕರಾದ ಗಣೇಶ ರುದ್ರಘಂಟಿ, ದಯಾನಂದ ಶಿರಶ್ಯಾಡ, ಶಿವಾನಂದ ಹೂಗಾರ, ಸುರೇಶ ಬೂದಿಹಾಳ, ನಾಗರಾಜ ಅವಜಿ, ಭೀಮು ವಳಸಂಗ, ಮಲ್ಲಿಕಾರ್ಜುನ ಹಳ್ಳದ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net