ಬೆಳೆಗಾರರೊಂದಿಗೆ ಕಾರ್ಮಿಕರ ಬದುಕು ಹಸನಾಗಲಿ

30skpp1
ಸಕಲೇಶಪುರದಲ್ಲಿ ಭಾನುವಾರ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಕಾಫಿ ದಿನ ಕಾರ್ಯಕ್ರಮವನ್ನು ಗಣ್ಯರು ಗಿಡಕ್ಕೆ ನೀರು ಹಾಕುವ ಮುಖಾಂತರ ಉದ್ಘಾಟಿಸಿದರು.
Published on

ಸಕಲೇಶಪುರ: ಪ್ರತಿಯೊಬ್ಬರೂ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ 9ನೇ ಅಂತಾರಾಷ್ಟ್ರೀಯ ಕಾಫಿ ದಿನ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಶಾಲೆಯಲ್ಲಿ ವಿದ್ಯೆ ಕಲಿತೆವೆಂಬುದು ಮುಖ್ಯವಲ್ಲ, ಬದಲಾಗಿ ನಾವು ಯಾವ ರೀತಿ ಭವಿಷ್ಯ ರೂಪಿಸಿಕೊಳ್ಳುತ್ತೇವೆ ಎಂಬುದು ಮುಖ್ಯ ಎಂದರು.

ಕಾಫಿ ದಿನಾಚರಣೆಯಿಂದ ಕಾಫಿ ವಲಯದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬದುಕು ಸಹ ಬೆಳೆಗಾರರ ಜತೆ ಹಸನಾಗಬೇಕು. ಆಸ್ತಿ ಮಾಡುವುದು ಮುಖ್ಯವಲ್ಲ, ಬದಲಾಗಿ ಮಕ್ಕಳನ್ನು ಆಸ್ತಿಯನ್ನಾಗಿ ಮಾಡಬೇಕು ಎಂದರು.

ಕಾಫಿ ಬೆಳೆಗಾರರು ಈ ಹಿಂದಿಗಿಂತ ಉತ್ತಮ ಪರಿಸ್ಥಿತಿಯಲ್ಲಿದ್ದಾರೆ. ಕಾಫಿ ಅಂತಾರಾಷ್ಟ್ರೀಯ ಕೃಷಿ. ಸುಮಾರು 8000 ಕೋಟಿ ರೂ. ಇದರಿಂದ ನಮ ್ಮದೇಶಕ್ಕೆ ವಿದೇಶಿ ವಿನಿಮಯ ಬರುತ್ತಿದೆ. 17ನೇ ಶತಮಾನದಲ್ಲಿ ಕಾಫಿ ಕೃಷಿ ಆರಂಭಗೊಂಡಿದ್ದು, ನಾಲ್ಕು ಶತಮಾನಗಳಿಂದ ಕಾಫಿ ಬೆಳೆಯಲಾಗುತ್ತಿದೆ ಎಂದರು.

ಎಚ್.ಡಿ.ಪಿ.ಎ. ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಶೇ.80 ಕಾಫಿ ಬೆಳೆಗಾರರು ಸಣ್ಣ ಬೆಳೆಗಾರರಾಗಿದ್ದು, ಒಗ್ಗಟ್ಟಿನಿಂದ ತಮ್ಮದೇ ಆದ ಬ್ರಾೃಂಡ್ ಸೃಷ್ಟಿಸಿಕೊಳ್ಳಬೇಕು. ಅದರೊಂದಿಗೆ, ಸರ್ಕಾರದ ಸೌಲಭ್ಯ ಪಡೆದು ಸ್ವಂತ ಮಾರ್ಕೆಟಿಂಗ್ ವ್ಯವಸ್ಥೆ ಮಾಡಿಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.

ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ.ಮೋಹನ್‌ಕುಮಾರ್ ಮಾತನಾಡಿ, ಕಾಡಾನೆ ಸಮಸ್ಯೆ ಬಗೆಹರಿಯುವಂತೆ ಒತ್ತಾಯಿಸಿ ನಿರಂತರವಾಗಿ ಹೋರಾಟ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಾಡಾನೆ ಸಮಸ್ಯೆಗೆ ಸರ್ಕಾರ ಶಾಶ್ವತ ಪರಿಹಾರ ಹುಡುಕುವಂತೆ ನ್ಯಾಯಾಲಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಕಾಫಿ ಉತ್ಪಾದನೆ ಕಡಿಮೆಯಿದ್ದಾಗ ಚಿಕೋರಿ ಕಾಫಿ ಬಳಸಲಾಗುತ್ತಿತ್ತು. ಹಾಗಾಗಿ ಮುಂದಿನ ದಿನಗಳಲ್ಲಿ ಚಿಕೋರಿ ರಹಿತ ಕಾಫಿಯನ್ನು ಬಳಸಬೇಕು.ಇದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ಮೂರೇ ಮೂರು ಪೆಗ್… ಹಾಡಿಗೆ ಕಾಫಿ ಸಾಹಿತ್ಯವನ್ನು ಸೇರಿಸಿ ಹಾಡು ಹಾಡುವ ಮೂಲಕ ಎಲ್ಲರನ್ನೂ ರಂಜಿಸಿದರು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 75ರ ಬದಿಯ ವಾಹನ ಸವಾರರು ಹಾಗೂ ಪ್ರಯಾಣಿಕರಿಗೆ ಉಚಿತವಾಗಿ ಕಾಫಿ ನೀಡಲಾಯಿತು. ಮಲೆನಾಡಿನ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಕಾಫಿ ಬೆಳೆಗಾರರು ಸಂಭ್ರಮಪಟ್ಟರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ತುರ್ತು ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಾಸಕ ಸಿಮೆಂಟ್ ಮಂಜು ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ನಿರ್ಗಮಿಸಿದರು. ಕಿರುತೆರೆ ನಟಿ ನೇಹಗೌಡ, ಎಚ್.ಡಿ.ಪಿ.ಎ.ಅಧ್ಯಕ್ಷ ಸುಬ್ರಹ್ಮಣ್ಯ, ಶಾಸಕ ಹುಲ್ಲಹಳ್ಳಿ ಸುರೇಶ್, ಕರ್ನಾಟಕ ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಕೃಷ್ಣಪ್ಪ, ಎಚ್.ಡಿ.ಪಿ.ಎ.ಉಪಾಧ್ಯಕ್ಷ ಪರಮೇಶ್, ಗೌರವ ಕಾರ್ಯದರ್ಶಿ ರಾಜೀವ್, ಜಂಟಿ ಕಾರ್ಯದರ್ಶಿ ಮೀರ್-ಆಲಿ-ರಝ್ವಿ, ಖಚಾಂಚಿ ಚಂದ್ರಶೇಖರ್, ಎಚ್.ಡಿ.ಪಿ.ಎ. ವ್ಯವಸ್ಥಾಪಕ ಜಯಪ್ರಕಾಶ್ ಮುಂತಾದವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net