

ಬ್ಯಾಡಗಿ: ಸತಿಪತಿಯರು ಹಾಲು ಜೇನಿನಂತೆ ಬೆರೆತು ಜೀವನ ನಡೆಸಬೇಕು. ಸಾಮರಸ್ಯದ ಮೂಲಕ ಕೌಟುಂಬಿಕ ಸಂಪ್ರದಾಯ ಹಾಗೂ ಹಿರಿಜೀವಿಗಳೊಂದಿಗೆ ಹೊಂದಿಕೊಂಡು ಬದುಕು ನಡೆಸಬೇಕು ಎಂದು ನಿವೃತ್ತ ಇಂಜಿನಿಯರ್ ಸಿ.ಆರ್. ಬಳ್ಳಾರಿ ಹೇಳಿದರು.
ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ತಾಲೂಕಿನ ಮೋಟೆಬೆನ್ನೂರಿನ ಬಸವೇಶ್ವರ ದೇವಸ್ಥಾನದಲ್ಲಿ ಬುಧವಾರ ಜರುಗಿದ ರಥೋತ್ಸವ, ಗುಗ್ಗಳ ಹಾಗೂ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಸಾವಿರ ಸಂಕಷ್ಟ ಎದುರಾದರೂ ವಿರಸ ಜೀವನಕ್ಕೆ ಆಸ್ಪದ ನೀಡದೆ, ಹಾಲ್ಜೇನಿನಂತೆ ಜೀವನವನ್ನು ರೂಪಿಸಿಕೊಂಡು ಉತ್ತಮ ಸಂಸಾರ ನಡೆಸಬೇಕಿದೆ. ಆಧುನಿಕ ಯುವಕ, ಯುವತಿಯರು ವಿವಾಹವಾಗಿ ಒಂದೆರಡು ವರ್ಷಗಳಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಕೆಟ್ಟ ಸಂಪ್ರದಾಯದಿಂದ ದೂರ ಉಳಿಯಬೇಕಿದೆ. ಜೀವನವೆಂದರೆ ಕಷ್ಟ, ಸುಖಗಳ ಸಂಕೋಲೆಯಿದ್ದಂತೆ. ಎಲ್ಲವನ್ನೂ ನಿಭಾಯಿಸಿಕೊಂಡು ತಾಳ್ಮೆಯಿಂದ ಜೀವನ ಸಾಗಿಸಬೇಕಿದೆ ಎಂದರು.
ಟ್ರಸ್ಟ್ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಈ ಸಾಮೂಹಿಕ ವಿವಾಹದಲ್ಲಿ 40 ಜತೆ ವಧು-ವರರಿಗೆ ಟ್ರಸ್ಟ್ ವತಿಯಿಂದ ತಾಳಿ, ಕಾಲುಂಗರ, ಸೀರೆ, ದೋತರ, ಬಾಸಿಂಗ ಹಾಗೂ ವಿವಾಹದ ಸಾಮಗ್ರಿಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಸರ್ಕಾರಗಳು ತಾರತಮ್ಯ ನೀತಿ ಅನುಸರಿಸದೆ, ಎಲ್ಲ ಸಮಾಜಗಳ ವಧು-ವರರಿಗೂ ಸಹಾಯಧನ ಘೊಷಿಸಿ, ಸರಳ ವಿವಾಹವನ್ನು ಪ್ರೋತ್ಸಾಹಿಸಬೇಕು ಎಂದರು.
ಉದ್ಯಮಿ ನಾಗರಾಜ ಆನ್ವೇರಿ, ವಿ.ಸಿ. ಹಾವೇರಿಮಠ, ಪುಟ್ಟನಗೌಡ್ರ ಪಾಟೀಲ, ಮೃತ್ಯುಂಜಯ ಲಕ್ಕಣ್ಣನವರ, ಶಿವಕುಮಾರ ಪಾಟೀಲ, ಲಲಿತಾ ಹಿರೇಮಠ, ಜಯಶೀಲಾ ಎಮ್ಮಿ, ಸುಶೀಲಮ್ಮ ರುದ್ರದೇವರಮಠ, ಎಂ.ಕೆ. ಕಿಶನಕುಮಾರ, ಪ್ರೇಮಾನಂದ ಲಕ್ಕಣ್ಣನವರ, ಮಲ್ಲಿಕಾರ್ಜುನ ಹಾವನೂರು, ಮಂಜುನಾಥ ಬೆನಕನಕೊಂಡ, ವಿಜಯಭರತ ಬಳ್ಳಾರಿ, ನಿಂಗಪ್ಪ ಅಂಗಡಿ, ಶಿವಬಸಪ್ಪ ಕುಳೇನೂರು, ಶಿವಪುತ್ರಪ್ಪ ಅಗಡಿ, ನಂಜುಂಡಸ್ವಾಮಿ ಹಾವೇರಿಮಠ, ಇತರರಿದ್ದರು.