

ಕೆ.ಆರ್.ನಗರ: ಆಗಸ್ಟ್ 15 ರಂದು ನಡೆಯಲಿರುವ 79ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ವಿವಿಧ ಸಂಘಟನೆಗಳ ಪ್ರಮುಖರು ಮತ್ತು ತಾಲೂಕಿನ ಸಾರ್ವಜನಿಕರ ಸಹಕಾರದಿಂದ ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಎಂದು ಶಾಸಕ.ಡಿ.ರವಿಶಂಕರ್ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಭವನದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಬಾರಿಗಿಂತ ಈ ಬಾರಿ ವಿಭಿನ್ನ ಮತ್ತು ವಿಶಿಷ್ಟವಾಗಿ ಕಾರ್ಯಕ್ರಮ ಅಯೋಜಿಸಬೇಕು. ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಸಂಬಂಧ ಅಧಿಕಾರಿಗಳು ಮತ್ತೊಂದು ಸಭೆ ನಡೆಸಿ ಸಮನ್ವಯತೆಯಿಂದ ಕೆಲಸ ಮಾಡಿ ಎಂದು ಸೂಚನೆ ನೀಡಿದ ಶಾಸಕರು, ನನಗೆ ವರದಿ ನೀಡಿ ಯಾವುದೇ ಸಮಸ್ಯೆಗಳಿದ್ದರೂ ನನ್ನ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರು ಮತ್ತು ನಿವೃತ್ತ ಯೋಧರನ್ನು ಗೌರವಿಸಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಬೇಕು ಎಂದ ಅವರು, ಉತ್ತಮ ಭಾಷಣಕಾರರನ್ನು ಕರೆಯಿಸಿ ಸ್ವಾತಂತ್ರ್ಯ ಹೋರಾಟಗಾರರ ಜೀವನ ಮತ್ತು ಸಾಧನೆ ಜತೆಗೆ ದೇಶ ಪ್ರೇಮ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕೆ.ಆರ್.ನಗರ ತಾಲೂಕಿನ ಜತೆಗೆ ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿಯೂ ವಿಶಿಷ್ಟವಾಗಿ ಸ್ವಾತಂತ್ರೃ ದಿನವನ್ನು ಆಚರಿಸಲು ಅಲ್ಲಿನ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ನಾಗರಿಕರ ಸಲಹೆ ಮತ್ತು ಸಹಕಾರ ಪಡೆಯಬೇಕು. ನಾನು ಈ ಬಾರಿ ಸಾಲಿಗ್ರಾಮದಲ್ಲಿ ನಡೆಯುವ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು.
ಎರಡು ತಾಲೂಕುಗಳ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ವಿದ್ಯುತ್ ದೀಪಾಲಂಕಾರ ಮತ್ತು ತಳಿರು ತೋರಣಗಳಿಂದ ಕಂಗೊಳಿಸುವಂತೆ ಮಾಡಬೇಕು. ಜತೆಗೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಅಲಂಕಾರ ಮಾಡಿ ಸ್ವಾತಂತ್ರ್ಯ ಸಂಭ್ರಮಕ್ಕೆ ಮೆರಗು ತುಂಬಬೇಕು ಎಂದು ಮನವಿ ಮಾಡಿದರು.
ಸಾಲಿಗ್ರಾಮ ತಾಲೂಕು ಕಾಂಗ್ರೆಸ್ ಎಸ್.ಸಿ.ಘಟಕದ ಅಧ್ಯಕ್ಷ ಕಂಠಿಕುಮಾರ್ ಮಾತನಾಡಿ, ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಹೆಚ್ಚು ಜನರು ಭಾಗವಹಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು ಗಮನ ಹರಿಸಿ ವ್ಯಾಪಕ ಪ್ರಚಾರ ಕೈಗೊಂಡು ಹೆಚ್ಚಿನ ಜನರನ್ನು ಕರೆತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ತಹಸೀಲ್ದಾರ್‌ಗಳಾದ ಜಿ.ಸುರೇಂದ್ರಮೂರ್ತಿ, ರುಕೀಯ ಬೇಗಂ, ತಾಪಂ ಇಒಗಳಾದ ವಿ.ಪಿ.ಕುಲದೀಪ್, ಎ.ರವಿ, ಪುರಸಭೆ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ, ಪುರಸಭೆ ಸದಸ್ಯ ಕೋಳಿಪ್ರಕಾಶ್, ಮಾಜಿ ಅಧ್ಯಕ್ಷ ನರಸಿಂಹರಾಜು, ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯಕುಮಾರ್, ರಾಜ್ಯ ರೈತಪರ್ವ ಸಂಘಟನೆ ಗೌರವಾಧ್ಯಕ್ಣ ಜೆ.ಎಂ.ಕುಮಾರ್, ಕಾಯಕ ಸಮಾಜದ ಅಧ್ಯಕ್ಷ ತಿಮ್ಮಶೆಟ್ಟಿ, ದಲಿತ ಮುಖಂಡ ಚಂದ್ರು, ಕಾಂಗ್ರೆಸ್ ಮುಖಂಡ ಕಲ್ಲಹಳ್ಳಿ ಶ್ರೀನಿವಾಸ್ ಇತರರು ಇದ್ದರು.