

ನಂಜನಗೂಡು: ಜಗದ್ಗುರು ಶ್ರೀ ರೇಣುಕಾಚಾರ್ಯರ ವಿಚಾರ ಮತ್ತು ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಶಿವಕುಮಾರ್ ಕಾಸನೂರು ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತದ ವತಿಯಿಂದ ಬುಧವಾರ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾನ್ ವ್ಯಕ್ತಿಯಾದ ಶ್ರೀ ಜಗದ್ಗುರು ರೇಣುಕಾಚಾರ್ಯರು 9 ಕೋಟಿ ಲಿಂಗಗಳನ್ನು ಸ್ಥಾಪನೆ ಮಾಡಿದ್ದಾರೆ. ಅದರಲ್ಲಿ 3 ಕೋಟಿ ಲಿಂಗಗಳನ್ನು ಶ್ರೀಲಂಕಾ ದೇಶದಲ್ಲಿ ಸ್ಥಾಪಿಸಿದ್ದಾರೆ. ಜತೆಗೆ 18 ಮಠಗಳನ್ನು ಕೂಡ ಸ್ಥಾಪಿಸಿರುವುದು ಇವರ ಸಾಧನೆಯಾಗಿದೆ. ಶ್ರೀ ರೇಣುಕಾಚಾರ್ಯರು ಎಲ್ಲರೂ ಸಮಾನರು ಎಂದು ದೇಶಕ್ಕೆ ಸಾರಿದರು. ಈಗಿನ ಕಾಲದಲ್ಲಿ ಇವರ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ನಂತರ ವೀರಶೈವ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ ಮಾತನಾಡಿ, ಸಾಂಕೇತಿಕವಾಗಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದೆ. ಇದು ಸಮಾಜಕ್ಕೆ ಅತ್ಯಂತ ಸಂತೋಷದ ವಿಚಾರವಾಗಿದೆ. ಪುರಾತನ ಇತಿಹಾಸ ಹೊಂದಿರುವ ವೀರಶೈವ ಸಮಾಜ ಒಗ್ಗಟ್ಟಾಗಿ ಹೋಗಬೇಕು ಎಂದು ಸಲಹೆ ನೀಡಿದರು.
ನಂತರ ಸಾಹಿತಿ ಕಳೆಲೆ ಗುರುಸ್ವಾಮಿ ಮಾತನಾಡಿ, ಶ್ರೀ ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಅಂದೇ ಜಗತ್ತಿಗೆ ಸಾರಿದವರು. ಪ್ರಪಂಚದಲ್ಲಿ 191 ದೊಡ್ಡ ದೇಶಗಳಿದ್ದು, 4300 ಧರ್ಮಗಳಿವೆ. ಇವುಗಳಲ್ಲಿ ಅತಿ ದೊಡ್ಡ ಧರ್ಮ ಎಂದರೆ ಹಿಂದು ಧರ್ಮ. ಇವರು ವಿಭೂತಿ ಪುರುಷರಾಗಿದ್ದು ಇಂತಹ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ನೆನೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ತಹಸಿಲ್ದಾರ್ ಶಿವಕುಮಾರ್ ಕಾಸನೂರು, ಬಿಇಒ ಮಹೇಶ್, ವೀರಶೈವ ಮಹಾಸಭಾ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಆರ್.ವಿ.ಮಹದೇವಸ್ವಾಮಿ, ಅನುಸೂಯ ಗಣೇಶ್, ದೇವನೂರು ಶಿವಪ್ಪ ದೇವರು, ನಟೇಶ್, ಮಹೇಶ್, ನಿವೃತ್ತ ಶಿಕ್ಷಕ ಕಳಲೆ ಮಹೇಶ್, ವೀರಶೈವ ಸಂಘದ ಅಧ್ಯಕ್ಷ ಬಸವಣ್ಣ, ಗುರುಸ್ವಾಮಿ, ವೃಷಭೇಂದ್ರಪ್ಪ, ಮಹದೇವಸ್ವಾಮಿ ಇತರರಿದ್ದರು.