ಹಿಂದು ಸಮಾಜ ಸದಾಕಾಲ ಜಾಗೃತವಾಗಿರಲಿ

10 MDG 1
Published on

ಮುಂಡರಗಿ: ಹಿಂದು ಸಂಘಟನೆಗಳ ಕಾರ್ಯ ನಿರಂತರವಾಗಿರಬೇಕು. ಪ್ರತಿಯೊಂದು ಮನೆ ಸ್ವಾಭಿಮಾನ, ಸಂಸ್ಕಾರದ ಕೇಂದ್ರವಾಗಬೇಕು. ದೇಶದ ಹಿಂದುಗಳು ಸದಾಕಾಲ ಜಾಗೃತರಾಗಿ ಸಂಘಟನೆ ಕೆಲಸ ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಗೌರವಿಸಿ ಬಾಳಬೇಕು. ತಂದೆ ತಾಯಿಗಳನ್ನು ಗೌರವದಿಂದ ಕಾಣಬೇಕು. ಹಿಂದುಗಳೆಲ್ಲ ಒಂದು ಎನ್ನುವ ಭಾವನೆ ಬರಬೇಕು ಎಂದು ವಿಹಿಂಪ ಕರ್ನಾಟಕ ಉತ್ತರ ಪ್ರಾಂತ ಸಹಕಾರ್ಯದರ್ಶಿ ವಿನಾಯಕ ತಳಗೇರಿ ಹೇಳಿದರು.
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನ ಮಠದಲ್ಲಿ ವಿಶ್ವ ಹಿಂದು ಪರಿಷತ್ ತಾಲೂಕು ಘಟಕದ ವತಿಯಿಂದ ಮಂಗಳವಾರ ಜರುಗಿದ ಸ್ಥಾಪನಾ ದಿನ ಮತ್ತು ಷಷ್ಠಿಪೂರ್ತಿ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಹಿಂಪ ಧಾರ್ಮಿಕ ಸಂಘಟನೆಯಾಗಿದೆ. ಹಿಂದುಗಳಿರುವ 40 ದೇಶಗಳಲ್ಲಿ ಸಂಘಟನೆಯ ಕೆಲಸ ನಡೆಯುತ್ತಿದೆ. ಮತಾಂತರ, ಲವ್ ಜಿಹಾದ್, ಗೋಹತ್ಯೆ ತಡೆಗಟ್ಟಬೇಕು. ಹಿಂದು ಸಮಾಜಕ್ಕೆ ತೊಂದರೆ ಕೊಟ್ಟರೆ ಬಜರಂಗದಳ, ವಿಹಿಂಪ ಸಂಘಟಿಕರು ಹೋರಾಟ ಮಾಡುತ್ತಾರೆ. ಯುವಕರು ಹಿಂದು ಸಮಾಜದ ಸಂರಕ್ಷಣೆ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.
ಮನುಷ್ಯನು ಸಮಾಜಮುಖಿ ಕೆಲಸ ಮಾಡಲು ಮುಂದಾಗಬೇಕು. ಮತ್ತೊಬ್ಬರ ಕಣ್ಣೀರು ಒರೆಸಿ ಸಾಂತ್ವನ ಹೇಳಿ ಅವರ ಜೀವನಕ್ಕೆ ಸಹಾಯಕರಾಗುವುದೇ ನಿಜವಾದ ಆಧ್ಯಾತ್ಮ. ಜೀವನ ಬೇರೆ, ಉಪಜೀವನ ಬೇರೆ. ಜೀವನ ಹೊಸದೃಷ್ಟಿ, ಹೊಸ ಬೆಳಕು, ಹೊಸ ಹೆಜ್ಜೆ ಇಡುವುದಕ್ಕೆ ಪ್ರೇರಣೆ ತಂದುಕೊಡುತ್ತದೆ. ಉಪಜೀವನ ಸ್ವಂತಕ್ಕೆ, ಜೀವನ ಸಮಾಜಕ್ಕೆ ಸಿಮೀತವಾಗಬೇಕು. ಈ ರೀತಿಯಲ್ಲಿ ಜೀವನ ನಡೆಸಬೇಕು ಎಂದರು.
ಸಮಾರಂಭ ಉದ್ಘಾಟಿಸಿದ ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಹಿಂಪ ಕಾರ್ಯಕರ್ತರು ಕ್ರಿಯಾಶೀಲವಾಗಿ ರಾಷ್ಟ್ರಕ್ಕೆ ಸೇವೆಯನ್ನು ಸಲ್ಲಿಸುತ್ತಾರೆ. ಹಿಂದುಗಳು ಒಂದು ಎನ್ನುವ ಭಾವನೆಯಲ್ಲಿ ಸಂಘಟನೆ ಮಾಡುತ್ತಿವೆ. ಮಕ್ಕಳು ದೇಶಾಭಿಮಾನ ಹೊಂದಬೇಕು. ದೇಶವನ್ನು ಬೆಳೆಸುವ ಕಾರ್ಯವಾಗಬೇಕು. ವಿದೇಶಕ್ಕೆ ಹೋದರೂ ಅಲ್ಲೂ ನಮ್ಮ ದೇಶದ ಬಗ್ಗೆ ಅಭಿಮಾನದಿಂದ ಮಾತನಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಖಂಡ ಯಮನಪ್ಪ ಭಜಂತ್ರಿ ಮಾತನಾಡಿದರು. ವಿಹಿಂಪ ಜಿಲ್ಲಾಧ್ಯಕ್ಷ ಶ್ರೀಧರ ಕುಲಕರ್ಣಿ, ಶೇಖರಗೌಡ ಪಾಟೀಲ, ಪರುಶುರಾಮ ಸುಣಗಾರ, ಗುಡದೀರಪ್ಪ ಲಿಂಬಿಕಾಯಿ, ನಾಗರಾಜ ಮುರಡಿ, ಮಂಜುನಾಥ ಮುಧೋಳ, ಹನುಮಂತ ಅಕ್ಕಸಾಲಿ, ಮಹಾಂತೇಶ ಕೊರಡಕೇರಿ, ಇತರರಿದ್ದರು. ದೇವಪ್ಪ ಇಟಗಿ ಸ್ವಾಗತ ಗೀತೆ ಪ್ರಸ್ತುತಪಡಿಸಿದರು. ಮಂಜುನಾಥ ಇಟಗಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net