ಇತರ ಸಮಾಜಕ್ಕೆ ಆದರ್ಶರಾಗಿರಲಿ ಹವ್ಯಕರು

ylp havyaka
Published on

ಯಲ್ಲಾಪುರ: ಇತರ ಸಮಾಜಕ್ಕೆ ಆದರ್ಶರಾಗಬೇಕಾದವರು ಹವ್ಯಕರು ತಮ್ಮತನ ಕಳೆದುಕೊಳ್ಳಬಾರದು ಎಂದು ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.

ಪಟ್ಟಣದ ನಾಯಕನಕೆರೆ ಶಾರದಾಂಬಾ ಸಭಾಭವನದಲ್ಲಿ ತಾಲೂಕು ಹವ್ಯಕ ನೌಕರರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ವಿದ್ಯಾರ್ಥಿ ನಿಧಿ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಲ್ಲಾಪುರದಲ್ಲಿ ಎಂಟು ವರ್ಷಗಳ ಕಾಲ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ಪದೋನ್ನತಿ ಹೊಂದಿದ ಕುಮಟಾ ಡಯಟ್ ಉಪನಿರ್ದೇಶಕ ಎನ್.ಆರ್. ಹೆಗಡೆ ಅವರನ್ನು ಗೌರವಿಸಲಾಯಿತು.

ಹಿಂದೂಸ್ತಾನಿ ಸಂಗೀತದಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ರಾಜ್ಯ ಕಲಾಶ್ರೀ ಪ್ರಶಸ್ತಿ ಪಡೆದ ಸಮೃದ್ಧಿ ಭಾಗ್ವತ, ಸಿಬಿಎಸ್​ಸಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಶ್ರೀನಿಧಿ ಭಟ್ಟ ಅವರನ್ನು ಪುರಸ್ಕರಿಸಲಾಯಿತು.

ಯೋಗ ಪಟುಗಳಾದ ರಾಧಾ ಭಟ್ಟ, ಸುಬ್ರಾಯ ಭಟ್ಟ ಹಾಗೂ ತಾಲೂಕಿನಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನೌಕರರನ್ನು ಗೌರವಿಸಲಾಯಿತು. ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಇದೇ ಸಂದರ್ಭದಲ್ಲಿ ನಡೆದ ಅನೇಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸಂಘದ ಅಧ್ಯಕ್ಷ ಡಿ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶಾರದಾಂಬಾ ಪಾಠಶಾಲೆ ಅಧ್ಯಕ್ಷ ಉಮೇಶ ಭಾಗ್ವತ ಮಾತನಾಡಿದರು. ಜಿ.ಎಸ್. ಗಾಂವ್ಕರ, ಲಕ್ಷ್ಮೀ ಭಟ್ಟ, ನಾಗರಾಜ ಹೆಗಡೆ, ವರದರಾಜ ಭಟ್ಟ, ಸುದರ್ಶನ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net