ಹನಮ ಜಯಂತ್ಯುತ್ಸವ ಶಾಂತಿಯುತವಾಗಿ ಆಚರಣೆಯಾಗಲಿ

IMG_20241220_153901
ಹನುಮ ಜಯಂತಿ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಎಸ್ಪಿ ಮಹಮ್ಮದ್ ಸುಜೀತಾ ಪಟ್ಟಣದ ಸಾರ್ವಜನಿಕ ಸಮುದಾಯ ಭವನದಲ್ಲಿ ಶಾಂತಿ ಸಭೆ ನಡೆಸಿದರು. ಶಾಲೂ, ಪ್ರದೀಪ್ ಕುಮಾರ್, ಅಭಿಜಿತ್ ಭಾಗವಹಿಸಿದ್ದರು.
Published on

ಹೊಳೆನರಸೀಪುರ: ಪಟ್ಟಣದ ನಾಗರಿಕರೆಲ್ಲ ಸೇರಿ ಡಿ.21ರಂದು ಆಚರಿಸುತ್ತಿರುವ ಹನುಮ ಜಯಂತಿ ಭಕ್ತಿಪೂರ್ವಕವಾಗಿರಲಿ. ಮೆರವಣಿಗೆ ಮಾಡುವಾಗ ಯಾರು ಉದ್ವೇಗಕ್ಕೆ ಒಳಗಾಗಬಾರದು. ಈ ಆಚರಣೆ ಎಲ್ಲರಿಗೂ ಮಾದರಿ ಆಗಿರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ ಸಲಹೆ ನೀಡಿದರು.

ಪಟ್ಟಣದ ಸಾರ್ವಜನಿಕ ಸಮುದಾಯ ಭವನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಹನಮ ಜಯಂತಿ ಆಚರಣೆ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹನುಮ ಜಯಂತಿ ಮೆರವಣಿಗೆ ವೇಳೆ ಟ್ಯಾಬ್ಲೋಗಳು, ಡಿಜೆ ಸೇರಿದಂತೆ ಭಕ್ತಿಪೂರ್ವಕ ಚಟುವಟಿಕೆಗಳನ್ನು ನಾವು ತಡೆಯುವುದಿಲ್ಲ. ಆದರೆ ಎಲ್ಲಿಯೂ ಕೂಡ ಯಾರಿಂದಲೂ ಯಾರಿಗೂ ತೊಂದರೆ ಆಗದಂತೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಪೊಲೀಸರು ಅನಿವಾರ್ಯವಾಗಿ ನಿಯಂತ್ರಿಸಬೇಕಾಗುತ್ತದೆ ಎಂದರು ಎಚ್ಚರಿಸಿದರು.

ಹನುಮ ಜಯಂತಿ ಮೆರವಣಿಗೆ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಿಂದ ಪ್ರಾರಂಭಿಸಿ, ಜಯಚಾಮರಾಜೇಂದ್ರ ವೃತ್ತದ ಮೂಲಕ ಹೊಳೆದಂಡೆ ರಸ್ತೆ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಬಳಿ ಸಾಗಿ ಪೇಟೆ ಮುಖ್ಯರಸ್ತೆ, ಅಂಬೇಡ್ಕರ್ ವೃತ್ತದ ಮೂಲಕ ಮೈಸೂರು ರಸ್ತೆಯಲ್ಲಿ ಸಂಚರಿಸಲಿದೆ. ಬಾಲಕರ ಪದವಿಪೂರ್ವ ಕಾಲೇಜಿನ ಸಮೀಪದ ಸಾರಿಗೆ ಸಂಸ್ಥೆ ಡಿಪೋ ರಸ್ತೆ, ಹೌಸಿಂಗ್ ಬೋರ್ಡ್ ವೃತ್ತದ ಮೂಲಕ ರಾಜಬೀದಿಯಲ್ಲಿ ಸಾಗಿ ಓಂಕಾರೇಶ್ವರ ದೇವಸ್ಥಾನದ ಬಳಿಯ ವೇದಿಕೆಯಲ್ಲಿ ಮುಕ್ತಾಯವಾಗಲಿದೆ. ನಂತರ ವೇದಿಕೆ ಸಮಾರಂಭ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದರು.

ಡಿವೈಎಸ್‌ಪಿ ಶಾಲೂ ಮಾತನಾಡಿ, ಗಣೇಶೋತ್ಸವವನ್ನು ಶಾಂತಿಯಿಂದ ಆಚರಿಸಿದ್ದೀರಿ. ಅದೇ ರೀತಿ ಹನುಮ ಜಯಂತಿಯನ್ನು ಆಚರಿಸಿ ಎಂದರು.

ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್, ಭಾಷಣಕಾರರು ಯಾವುದೇ ಉದ್ವೇಗ, ಆವೇಶ ತರಿಸುವ ಮಾತುಗಳನ್ನು ಆಡದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಮುಸ್ಲಿಂ ಜನಾಂಗದ ಇಲಿಯಾಸ್ ಹಾಗೂ ಮುಜಾಹಿದ್ ಪಾಶ ಮಾತನಾಡಿ, ಹನುಮ ಜಯಂತಿ ಆಚರಣೆಗೆ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ನಿಮ್ಮ ಮೆರವಣಿಗೆ ರಿವರ್ ಬ್ಯಾಂಕ್ ರಸ್ತೆಯಲ್ಲಿ ಸಾಗುವಾಗ ನಾವು ತಂಪು ಪಾನೀಯ ವಿತರಿಸುತ್ತೇವೆ ಎಂದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮ್ಮದ್ ಸುಜೀತಾ 5 ಸಾವಿರ ರೂ. ದೇಣಿಗೆ ನೀಡಿದರು. ಮುಖಂಡರಾದ ರಂಗನಾಥ್, ಅಮಿತ್‌ಗೌಡ, ಕಿಶೋರ್, ಶಂಕರ ನಾರಾಯಣ್ ಐತಾಳ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net