

ಶೃಂಗೇರಿ: ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಯೋಜನೆಯ ಲಾಭವನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಪಟ್ಟಣದ ವಿದ್ಯಾನಗರದ ಕನ್ನಡ ಭವನದಲ್ಲಿ ಶ್ರೀ ಶಾರದಾಂಬಾ ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘ ಏರ್ಪಡಿಸಿದ್ದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರ್ಮಿಕರಿಗೆ ನೀಡುತ್ತಿರುವ ಸೌಲಭ್ಯ ಕೆಲವೆಡೆ ದುರುಪಯೋಗವಾಗುತ್ತಿರುವ ಬಗ್ಗೆ ದೂರಿದೆ. ಯೋಜನೆ ಲಾಭ ಕಾರ್ಮಿಕರಿಗೆ ದೊರಕಬೇಕು.ಕಷ್ಟಪಟ್ಟು ದುಡಿಯುವ ಕಾರ್ಮಿಕರು ತಮ್ಮ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ವೈದ್ಯಕೀಯ ವೆಚ್ಚ ನಿರ್ವಹಣೆ ಮಾಡಬೇಕಿದ್ದು, ಸರ್ಕಾರ ಸಂಕಷ್ಟದಲ್ಲಿರುವ ಕಾರ್ಮಿಕರಿಗಾಗಿ ಯೋಜನೆ ತಂದಿದೆ. ಯಶಸ್ವಿನಿ ಯೋಜನೆಯನ್ನು ವೈದ್ಯಕೀಯ ವೆಚ್ಚಕ್ಕಾಗಿ ಬಳಸಿಕೊಳ್ಳಬಹುದು ಎಂದರು.
ಗುತ್ತಿಗೆದಾರ ಬಿ.ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಮುನಿಸ್ವಾಮಿ, ಭಾಸ್ಕರ ಪೂಜಾರಿ, ಪ್ರವೀಣ ಪೂಜಾರಿ, ಎಚ್.ಎಸ್.ವೇಣುಗೋಪಾಲ್, ಮೆಣಸೆ ಚಂದ್ರಶೇಖರ್, ಚಂದ್ರನಾಯ್ಕ, ಮುತ್ತುಶೆಟ್ಟಿ, ಶಿವರಾಮ್, ಉಳುವೆ ಗಿರೀಶ್ ಇದ್ದರು.