ಸರ್ಕಾರದ ಯೋಜನೆ ಸಕಾಲಕ್ಕೆ ಸಿಗುವಂತಾಗಲಿ; ನ್ಯಾ.ಕೆ.ಎನ್. ಫಣೀಂದ್ರ

UPA LOKAYUKTA
ವಿಜಯಪುರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ, ದೂರು ವಿಚಾರಣೆ ಸಭೆಯನ್ನು ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ ಮತ್ತಿತರರಿದ್ದಾರೆ.
Published on

ವಿಜಯಪುರ: ತಾಯಿಯ ಗರ್ಭದಿಂದ ಗೋರಿಯವರೆಗೆ ಸರ್ಕಾರದ ಯೋಜನೆಗಳಿದ್ದು, ಕೆಲವರ ಅಧಿಕಾರ ದುರುಪಯೋಗ, ಕರ್ತವ್ಯ ಲೋಪ, ನಿರ್ಲಕ್ಷೃ ಹಾಗೂ ಲಂಚಬಾಕ ಸಂಸ್ಕೃತಿಯಿಂದಾಗಿ ಸಕಾಲಕ್ಕೆ ಸಮರ್ಪಕವಾಗಿ ಅರ್ಹರಿಗೆ ತಲುಪುತ್ತಿಲ್ಲ. ಹೀಗಾಗಿ ಲೋಕಾಯುಕ್ತದಂಥ ಸಂಸ್ಥೆಗಳು ಅಂಥ ಭ್ರಷ್ಟ ಅಧಿಕಾರಿಗಳ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಹೇಳಿದರು.

ಇಲ್ಲಿನ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರು ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಾರ್ವಜನಿಕ ಸಮಸ್ಯೆಗಳನ್ನು ಪರಿಹಾರ ಮಾಡುವುದು ಸರ್ಕಾರಿ ನೌಕರರ ಆದ್ಯತೆಯಾಗಬೇಕು. ಸಮಸ್ಯೆಗಳು ಉದ್ಭವವಾಗದಂತೆ ತಮಗೆ ವಹಿಸಿದ ಕಾರ್ಯದ ವ್ಯಾಪ್ತಿ, ಜವಾಬ್ದಾರಿ ಅರಿತುಕೊಂಡು ಕಾರ್ಯ ನಿರ್ವಹಿಸಬೇಕು. ಅಧಿಕಾರಿಗಳು ಸಾರ್ವಜನಿಕರೊಂದಿಗೆ ತಾಳ್ಮೆ ಹಾಗೂ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸುವ ಮೂಲಕ ಸಾರ್ವಜನಿಕ ಆಡಳಿತ ಗುಣಮಟ್ಟ ಹೆಚ್ಚಿಸಬೇಕು ಎಂದರು.
ಸಾರ್ವಜನಿಕರ ಹಕ್ಕುಗಳ ಉಲ್ಲಂಘನೆಯಾಗದಂತೆ, ವಿಳಂಬವಾಗದಂತೆ, ನಿಗದಿತ ಸಮಯದಲ್ಲಿ ಸರ್ಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ತರಬೇಕು ಎಂದರು.

ಸಂವಿಧಾನದ ಆಶಯ ಈಡೇರಿಸೋಣ

ಸರ್ವರಿಗೂ ಸಮಪಾಲು- ಸರ್ವರಿಗೂ ಸಮಬಾಳು ಎಂಬುದು ಭಾರತೀಯ ಸಂವಿಧಾನದ ಆಶಯ. ಈ ಆಶಯಕ್ಕೆ ಅನುಗುಣವಾಗಿ ಲೋಕಾಯುಕ್ತ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ನಾಗರಿಕರಿಗೆ ಗೌರವಯುತ ಬದುಕು ಹಾಗೂ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಕಲ್ಪಿಸಿರುವ ಸಂವಿಧಾನದ ರಕ್ಷಣೆಗಾಗಿ ಕಾರ್ಯಾಂಗ, ನ್ಯಾಯಾಂಗ ಹಾಗೂ ಶಾಸಕಾಂಗ ಎಂಬ ಮೂರು ಅಂಗ ಸ್ಥಾಪಿಸಲಾಗಿದೆ. ಈ ಮೂರು ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿವೆಯೋ ಇಲ್ಲವೋ ಎಂಬುದನ್ನು ಪರಾಮರ್ಶೆ ಮಾಡುವ ಹಕ್ಕು ಪತ್ರಿಕಾ ರಂಗಕ್ಕೆ ನೀಡಲಾಗಿದೆ. ಪತ್ರಿಕಾ ಅಂಗವನ್ನು ನಾಲ್ಕನೇ ಅಂಗ ಎಂದು ಕರೆಯಲಾಗುತ್ತಿದೆ ಎಂದರು.

ಶಿಕ್ಷಣ, ಆರೋಗ್ಯ, ಆಹಾರ ಮತ್ತು ವಸತಿ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಪಡೆಯುವ ಹಕ್ಕು ಸಂವಿಧಾನ ನೀಡಿದೆ. ಆಸ್ತಿ- ಪಾಸ್ತಿ ರಕ್ಷಣೆ ಹಕ್ಕು ನೀಡಲಾಗಿದೆ. ಅದಕ್ಕೆ ಬೇಕಾದ ಸಾಕಷ್ಟು ಕಾನೂನು ರಚಿಸಲಾಗಿದೆ. ನ್ಯಾಯಯುತವಾಗಿ ಸಂಪಾದಿಸಿದ ಆಸ್ತಿ ರಕ್ಷಿಸುವ ಮತ್ತು ಮಾರಾಟ ಮಾಡುವ ಹಕ್ಕು ಎಲ್ಲರಿಗೂ ಇದೆ. ಉತ್ತಮವಾಗಿ ಹಾಗೂ ಗೌರವಯುತವಾಗಿ ಬದುಕುವ ಹಕ್ಕು ಎಲ್ಲರಿಗೂ ಇದೆ. ಅದಕ್ಕಾಗಿ ಕಾನೂನು ಸಹ ರೂಪಿಸಲಾಗಿದೆ. ಆದರೆ, ಕೆಲವು ಲೋಪ- ದೋಷ ಗಳಿಂದಾಗಿ ಕೆಲವರು ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಜನರ ಮೂಲಭೂತ ಹಕ್ಕುಗಳ ರಕ್ಷಣೆ, ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಆಗುತ್ತಿರುವ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಇಲಾಖೆ ಶ್ರಮಿಸುತ್ತಿದೆ ಎಂದರು.

ಲಂಚ ಸ್ವೀಕಾರ, ಕಾನೂನು ವಿರುದ್ಧ ಕಾರ್ಯ ನಿರ್ವಹಿಸುವುದು, ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಇರುವುದು, ಸಕಾಲಕ್ಕೆ ಕಾರ್ಯ ನಿರ್ವಹಿಸದೇ ಇರುವುದು, ಅಧಿಕಾರ ದುರುಪಯೋಗ ಹೀಗೆ ಅನೇಕ ಲೋಪ- ದೋಷಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವುದೇ ಲೋಕಾಯುಕ್ತದ ಉದ್ದೇಶ ಎಂದರು.

ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿಪಂ ಸಿಇಒ ರಿಷಿ ಆನಂದ, ಎಸ್‌ಪಿ ಋಷಿಕೇಷ ಸೋನಾವಣೆ, ವಿಚಾರಣೆ ಶಾಖೆಯ ಉಪ ನಿಬಂಧಕ ಪ್ರಕಾಶ ಎಲ್.ನಾಡಿಗೇರ, ಲೋಕಾಯುಕ್ತದ ಕಾನೂನು ಅಭಿಪ್ರಾಯದ ಸಹಾಯಕ ನಿಬಂಧಕ ಶುಭವೀರ್, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಎಸ್.ಹಾಗರಗಿ, ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ ಪಿ.ಎಂ.ಪಾಟೀಲ, ಲೋಕಾಯುಕ್ತ ಎಸ್‌ಪಿ ಟಿ. ಮಲ್ಲೇಶ, ಲೋಕಾಯುಕ್ತ ಡಿವೈಎಸ್‌ಪಿ ಸುರೇಶ ರೆಡ್ಡಿ ಮತ್ತಿತರರಿದ್ದರು. ರಾಜಶೇಖರ ದೈವಾಡಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net