ಸಮಾಜಕ್ಕೆ ಒಳಿತಾಗುವ ಕೆಲಸ ನಿರಂತರವಾಗಿರಲಿ

7 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜಕ್ಕೆ ಯಾವಾಗಲೂ ಒಳಿತಾಗುವ ಕಾರ್ಯ ಮಾಡಿದಾಗಲೇ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ಸಾಧ್ಯ. ಆ ನಿಟ್ಟಿನಲ್ಲಿ ಸದಾನಂದ ಕುರಡಿಕೇರಿ ಹಲವು ವರ್ಷಗಳಿಂದ ಕಿಶೋರಕುಮಾರ ಹಾಡುಗಳ ಮೂಲಕ ಕ್ಯಾನ್ಸರ್​ ಪೀಡಿತರಿಗೆ ಸಹಾಯ ಹಾಗೂ ಜಾಗೃತಿ ಮೂಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಈರೇಶ ಅಂಚಟಗೇರಿ ಹೇಳಿದರು.
ಕಿಶೋರ ಕುಮಾರ ಜನ್ಮದಿನ ನಿಮಿತ್ತ ನಗರದ ಎಂ.ಕೆ. ಸ್ಕ್ವೇರ್ ​ ಪ್ರತಿಷ್ಠಾನ, ಬಾಲಬಳಗ ಬಿಎಂಎಚ್​ಎಸ್​ ಸಹಯೋಗದಲ್ಲಿ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಸಮಾಜ ಹಾಗೂ ಯುವ ಜನತೆಗೆ ಒಂದು ಒಳ್ಳೆಯ ಸಂದೇಶವಾಗಿದೆ. ಬ್ಯಾಂಕ್​ ವೃತ್ತಿ ಜತೆಗೆ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಹಲವು ವರ್ಷಗಳಿಂದ ಹಾಡಿನ ಮೂಲಕ ಕ್ಯಾನ್ಸರ್​ ನೋವಿಗೆ ಮುಲಾಮು ಹಚ್ಚುತ್ತಿದ್ದಾರೆ. ಇಂತಹ ಕೆಲಸ ನಿರಂತರವಾಗಿ ನಡೆಯಲಿ ಎಂದರು.
ಡಾ. ಉಮೇಶ ಹಳ್ಳಿಕೇರಿ ಮಾತನಾಡಿ, ಕ್ಯಾನ್ಸರ್​ ಒಂದು ಮಾರಕ ರೋಗ. ಇಂದಿನ ಆಹಾರ ಪದ್ಧತಿಯಿಂದ ದೇಶದಲ್ಲಿ ರೋಗದ ತೀವ್ರತೆ 10:4 ಅನುಪಾತದಲ್ಲಿ ಹರಡುತ್ತಿದೆ. ಇದನ್ನು ತಡೆಗಟ್ಟಲು ನಮ್ಮ ಆಹಾರ ಪದ್ಧತಿ ಸುಧಾರಿಸಿಕೊಳ್ಳಬೇಕು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್​ ತೀವ್ರ ಗತಿಯಲ್ಲಿ ಹರಡುತ್ತಿದೆ. ಹೀಗಾಗಿ ಮಹಿಳೆಯರು ಆಗಾಗ ವೈದ್ಯಕಿಯ ತಪಾಸಣೆ ಮಾಡಿಸಿಕೊಳ್ಳುವುದು ಅನಿವಾರ್ಯ ಎಂದರು.
ಕಲಾವಿದ ಮಹಾದೇವ ಸತ್ತಿಗೇರಿ ಹಾಸ್ಯದ ಮೂಲಕ ಜನರನ್ನು ರಂಜಿಸಿದರು. ಸದಾನಂದ ಕುರಡಿಕೇರಿ ಅವರು ಕಿಶೋರ ಕುಮಾರ ಅವರ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು.
ಎಂ.ಎಂ. ಚಿಕ್ಕಮಠ, ಎನ್​.ಬಿ. ಪಾಟೀಲ, ಡಾ. ನಿತಿನ ಚಂದ್ರ ಹತ್ತಿಕಾಳ ಹಾಗೂ ಮಾಜಿ ಯೋಧರಿಗೆ ಸನ್ಮಾನಿಸಲಾಯಿತು. ರಾಜಶೇಖರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಯು.ಡಿ. ಬದಾಮಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net