ಗೋಕರ್ಣ ಕ್ಷೇತ್ರದ ಕೀರ್ತಿ ಬೆಳಗುವ ಕಾರ್ಯವಾಗಲಿ

GKN USATAV
Published on

ಗೋಕರ್ಣ: ಇದೇ ಮೊದಲ ಬಾರಿಗೆ ಸರ್ಕಾರದ ವತಿಯಿಂದ ಮಹಾಶಿವರಾತ್ರಿ ನಿಮಿತ್ತ ಆತ್ಮಲಿಂಗದ ಪವಿತ್ರ ತಾಣ ಗೋಕರ್ಣ ಕ್ಷೇತ್ರದಲ್ಲಿ ಮಹಾಶಿವರಾತ್ರಿ ಫೆ. 26, 27 ಮತ್ತು 28 ಈ ಮೂರು ದಿನ ಗೋಕರ್ಣ ಉತ್ಸವವನ್ನು ಆಯೋಜಿಸಲಾಗಿದೆ. ರಾಜ್ಯ ಮಟ್ಟದ ಪ್ರಖ್ಯಾತ ಕಲಾವಿದರು ಪಾಲ್ಗೊಳ್ಳಲಿದ್ದು ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಅಗತ್ಯ. ಈ ಉತ್ಸವದ ಮೂಲಕ ಪುರಾತನ ಧಾರ್ವಿುಕ ಕ್ಷೇತ್ರ ಗೋಕರ್ಣದ ಕೀರ್ತಿ ಬೆಳಗುವ ಕಾರ್ಯವಾಗಲಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಇಲ್ಲಿನ ಸರ್ಕೀಟ್ ಹೌಸ್​ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಉತ್ಸವದ ಕುರಿತು ಮಾಹಿತಿ ನೀಡಿದರು. ಸಮುದ್ರ ತೀರದಲ್ಲಿ ನಿರ್ವಿುಸಲಾದ ವಿಶೇಷ ಸಭಾಂಗಣದಲ್ಲಿ ಫೆ. 26ರಂದು ಸಂಜೆ 6-30ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ನಂತರ ಖ್ಯಾತ ಕಲಾವಿದರಿಂದ ನೃತ್ಯ,ವಾದ್ಯ ಸಮ್ಮೇಳನ ಮತ್ತು ಲೈವ್ ಬ್ಯಾಂಡ್ ನಡೆಯುವುದು. ಫೆ. 27ರಂದು 6-30ರಿಂದ ರಸಮಂಜರಿ, ಹೆಸರಾಂತ ಕಲಾವಿದರಿಂದ ನೃತ್ಯ ಪ್ರದರ್ಶನ ಮತ್ತು ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಫೆ. 28ರಂದು 6-30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ತರುವಾಯ ರುದ್ರವೀಣಾ ವಾದನ, ಹಾಸ್ಯ ರಸಮಂಜರಿ ಸುಪ್ರಸಿದ್ಧ ತಂಡದವರಿಂದ ನೃತ್ಯ ಮತ್ತು ಆರ್ಕೆಸ್ಟ್ರಾ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಮಹಾಶಿವರಾತ್ರಿಯ ಪರ್ವದಿನದಂದು ಆಯೋಜಿಸಿರುವ ಈ ಸಾಂಸ್ಕೃತಿಕ ವೈಭವವನ್ನು ಕಲಾಭಿಮಾನಿಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿದೆ ಎಂದರು.

ಕಾರ್ಯಕ್ರಮದ ಸಂಯೋಜಕರಾದ ವೇ. ರಾಜಗೋಪಾಲ ಅಡಿ ಗುರೂಜಿ ಮತ್ತು ಶ್ರೀಶಿವಶಕ್ತಿ ಬ್ಯಾಂಕ್ ಅಧ್ಯಕ್ಷ ಪ್ರದೀಪ ನಾಯಕ ಉತ್ಸವ ಸಿದ್ಧತೆಯನ್ನು ಸಭೆಯ ಮುಂದಿಟ್ಟರು.

ಪಂಚಾಯಿತಿ ಅಧ್ಯಕ್ಷೆ ಸುಮನಾ ಗೌಡ, ಹನೇಹಳ್ಳಿ ಗ್ರಾಪಂ ಅಧ್ಯಕ್ಷ ಸಣ್ಣು ಗೌಡ, ಶ್ರೀಮಹಾಬಲೇಶ್ವರ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ, ಶ್ರೀಕೃಷ್ಣ ವೇದ ಪ್ರತಿಷ್ಠಾನದ ಅಧ್ಯಕ್ಷ ವೇ. ಶಿವರಾಮ ಮಯ್ಯರ, ವಿಎಸ್​ಎಸ್ ಸಂಘದ ಉಪಾಧ್ಯಕ್ಷ ತೇಜಸ್ವಿ ನಾಯ್ಕ, ಸಮಿತಿ ಸದಸ್ಯ ಪ್ರಭಾಕರ ಪ್ರಸಾದ, ಗಣೇಶ ಪಂಡಿತ,ಪಹರೆ ವೇದಿಕೆ ಅಧ್ಯಕ್ಷ ನಾಗೇಶ ಗೌಡ, ಗುತ್ತಿಗೆದಾರ ಗಣಪತಿ ಪಟಗಾರ, ಪಂಚಾಯಿತಿ ಸದಸ್ಯರು, ವಿವಿಧ ಸಂಘಟನೆ ಪ್ರಮುಖರು, ಪಿಡಿಒ ಬಾಲಚಂದ್ರ ಪಟಗಾರ, ಕಾರ್ಯದರ್ಶಿ ಮಂಜುನಾಥ ಕೆ,ವಿನಾಯಕ ಸಿದ್ದಾಪುರ ಮತ್ತಿತರರಿದ್ದರು.ಎಸಿ ಕಚೇರಿ ತಹಸೀಲ್ದಾರ ಅಶೋಕ ಭಟ್ಟ ಮತ್ತು ತಹಸೀಲ್ದಾರ ಸತೀಶ ಗೌಡ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net