ಮುಂದಿನ ಪೀಳಿಗೆಗೂ ಜಾನಪದ ಸಂಸ್ಕೃತಿ ಉಳಿಯಲಿ

ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಪತ್‌ಕುಮಾರ್ ಉದ್ಘಾಟಿಸಿದರು.
ಮುನೀರ್ ಆಹಮದ್, ಸುಜಲಾದೇವಿ ಶಿವಪ್ರಕಾಶ್ ಇತರರಿದ್ದರು.
ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಂಪತ್‌ಕುಮಾರ್ ಉದ್ಘಾಟಿಸಿದರು. ಮುನೀರ್ ಆಹಮದ್, ಸುಜಲಾದೇವಿ ಶಿವಪ್ರಕಾಶ್ ಇತರರಿದ್ದರು.
Published on

ಶನಿವಾರಸಂತೆ: ಕರ್ನಾಟಕ ಜಾನಪದ ಪರಂಪರೆಯ ತವರೂರಾಗಿದ್ದು, ಮುಂದಿನ ಪೀಳಿಗೆಗಾಗಿ ಜಾನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ಕರ್ನಾಟಕ ಜಾನಪದ ಪರಿಷತ್‌ನ ಕೊಡಗು ಜಿಲ್ಲಾ ಘಟಕದ ಖಜಾಂಜಿ ಸಂಪತ್‌ಕುಮಾರ್ ಅಭಿಪ್ರಾಯಪಟ್ಟರು.

ಅಂತಾರಾಷ್ಟ್ರೀಯ ಜಾನಪದ ದಿನಾಚರಣೆ ಪ್ರಯುಕ್ತ ಇಲ್ಲಿನ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯಲ್ಲಿ ಜಾನಪದ ಪರಿಷತ್‌ನ ಶನಿವಾರಸಂತೆ ಹೋಬಳಿ ಘಟಕ ವತಿಯಿಂದ ಗುರುವಾರ ಆಯೋಜಿಸಿದ್ದ ಅಂತರ ಶಾಲಾ-ಕಾಲೇಜು ಜಾನಪದ ಗಾಯನ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನವರು ಜೀವನದ ಅನುಭವನ್ನು ಹಾಡಿನ ಮೂಲಕವಾಗಿ ಬಾಯಿಂದ ಬಾಯಿಗೆ ಹರಡಿಸಿದ ಜಾನಪದ ಹಾಡು ವಿವಿಧ ರೀತಿಯ ಜಾನಪದ ಪ್ರಕಾರಗಳಾಗಿ ಛಾವು ಮೂಡಿಸಿದೆ. ಆದರೆ ಇಂದು ಆಧುನಿಕತೆಯಿಂದಾಗಿ ಜಾನಪದ ಸಂಸ್ಕೃತಿ ಕ್ಷೀಣಿಸುತ್ತಿರುವ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿ ಸೊಗಡಿನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಉಳಿಸಿ ಬೆಳೆಸಬೇಕಿದೆ ಎಂದರು.

ಜಾನಪದ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಮುನೀರ್ ಆಹಮ್ಮದ್ ಮಾತನಾಡಿ, ಜಾನಪದ ಎಂಬುದು ಒಂದು ವಿಸ್ಮಯ ಮತ್ತು ಜ್ಞಾನದ ಪ್ರತೀಕ. ಜಾನಪದ ಹಾಡು ಮತ್ತು ಸಂಸ್ಕೃತಿಯನ್ನು ಹುಟ್ಟು ಹಾಕಿದ ಹಿಂದಿನವರು ವಿದ್ಯಾವಂತರಾಗಿರಲಿಲ್ಲ. ಆದರೂ ಜೀವನದ ಅನುಭವಗಳನ್ನು ಹಾಡಿನ ಮೂಲಕವಾಗಿ ಸಮಾಜಕ್ಕೆ ಹರಡಿದರು ಎಂದರು.

ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆ ಪ್ರಾಂಶುಪಾಲ ಟಿ.ಪಿ.ಶಿವಪ್ರಕಾಶ್ ಮಾತನಾಡಿ, ಜಾನಪದ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಬದುಕು ಕೂಡ ಹಸನವಾಗುತ್ತದೆ. ಈ ನಿಟ್ಟಿನಲ್ಲಿ ಜಾನಪದ ಸಂಸ್ಕೃತಿಯನ್ನು ಬಿಂಬಿಸಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಾನಪದ ಪರಿಷತ್‌ನ ಶನಿವಾರಸಂತೆ ಹೋಬಳಿ ಘಟಕದ ಅಧ್ಯಕ್ಷೆ ಡಿ. ಸುಜಲಾದೇವಿ, ಜಾನಪದ ಸಂಸ್ಕೃತಿ ಶಿಕ್ಷಣದ ಒಂದು ಭಾಗ. ಹಿಂದಿನವರು ಹೊಲ-ಗದ್ದೆಗಳಲ್ಲಿ ಜಾನಪದ ಹಾಡಿನ ಮೂಲಕ ಶ್ರಮವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಇದು ಜಾನಪದದ ನಾನಾ ಪ್ರಕಾರಗಳಾಗಿ ಬದಲಾಗಿದೆ ಎಂದರು.

ವೇದಿಕೆಯಲ್ಲಿ ಶನಿವಾರಸಂತೆ ಹೋಬಳಿ ಘಟಕದ ಉಪಾಧ್ಯಕ್ಷ ಎಂ.ಎನ್.ಹರೀಶ್, ಘಟಕದ ಸದಸ್ಯರಾದ ಪೂರ್ಣಿಮಾ ಕಿರಣ್, ದಿನೇಶ್ ಮಾಲಂಬಿ, ಎಚ್.ಕೆ.ಭಾಸ್ಕರ್, ನಳಿನಿ ನಾಗರಾಜ್, ಎಸ್.ಆರ್.ಶೋಭಾವತಿ ಮುಂತಾದವರು ಹಾಜರಿದ್ದರು.

ಜಾನಪದ ಗಾಯನ ಸ್ಪರ್ಧೆಯಲ್ಲಿ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಶನಿವಾರಸಂತೆ ಭಾರತಿ ಪ.ಪೂ.ಕಾಲೇಜಿನ ತಂಡ ಪ್ರಥಮ, ವಿಘ್ನೇಶ್ವರ ಬಾಲಕಿಯರ ಪ್ರೌಢ ಶಾಲಾ ತಂಡ ದ್ವಿತೀಯ ಹಾಗೂ ಶನಿವಾರಸಂತೆ ಭಾರತಿ ಪ್ರೌಢ ಶಾಲಾ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net