ರೈತರಿಗೆ ಸಿಗಲಿ ಹಾಲಿನ ದರ ಹೆಚ್ಚಳ ಲಾಭ

1111111111
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ದೊಡ್ಡಬಳ್ಳಾಪುರದ ತಾಲೂಕು ಕಚೇರಿ ವೃತ್ತದಲ್ಲಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು. ಸಿಪಿಐಎಂ ಪಕ್ಷದ ಪ್ರಭಾ ಬೆಳವಂಗಲ, ಪಿಎ ವೆಂಕಟೇಶ್​, ರುಕುಮಾರ್​ ರೇಣುಕಾರಾಧ್ಯ ಸೇರಿ ತಾಲೂಕಿನ ಪಕ್ಷದ ಮುಖಂಡರು ಇದ್ದರು.
Published on

ದೊಡ್ಡಬಳ್ಳಾಪುರ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ತಾಲೂಕು ಕಚೇರಿ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಹೀಗೆ ಎಲ್ಲ ಅಗತ್ಯ ವಸ್ತುಗಳ ಮೇಲೆ ತೆರಿಗೆ ವಿಧಿಸಿದ ಪ್ರಪಂಚದ ಏಕೈಕ ದೇಶ ಅಂದರೆ ಅದು ಭಾರತ ಎಂದು ಸಿಪಿಐಎಂ ಮುಖಂಡ ಚಂದ್ರತೇಜಸ್ವಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಕಿಡಿಕಾರಿದರು.

ಹಾಲಿನ ದರ ಏರಿಕೆಯಾಗಬೇಕು. ಆ ದರದ ಲಾಭ ರೈತರಿಗೆ ಸೇರಬೇಕು ನಿಜ, ಆದರೆ, ಅದೇ ರೀತಿ ಗ್ರಾಹಕರಿಗೆ ಹೊರೆಯಾಗದ ರೀತಿ ರಾಜ್ಯ ಸರ್ಕಾರವು ಅಗತ್ಯ ಕ್ರಮವನ್ನು ಸಹ ಕೈಗೊಳ್ಳಬೇಕು. ಇದು ಸರ್ಕಾರದ ಜವಾಬ್ದಾರಿ. ಹಾಲು ಜನಸಾಮಾನ್ಯರಿಗೆ ಅತಿ ಅಗತ್ಯ ವಸ್ತುಗಳಲ್ಲಿ ಒಂದು, ಇಂತವುಗಳಲ್ಲಿ ಲಾಭ ಅಪೇಸದೆ ಸರ್ಕಾರವು ಮಧ್ಯೆ ಪ್ರವೇಶಿಸಿ ಕ್ರಮ ಕೈಗೊಳ್ಳಬೇಕು. ಆದರೆ, ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಜನ ಸಾಮಾನ್ಯರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹಾಲಿಗೆ ಸಂಬಂಧಿಸಿ ಎಲ್ಲ ಪದಾರ್ಥಗಳ ಮೇಲೆ ತೆರಿಗೆ ವಿಧಿಸಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕೇಂದ್ರ ಸರ್ಕಾರವು ಉದ್ಯಮಿಗಳು, ಶ್ರೀಮಂತರಿಗೆ ಸಂಬಂಧಿಸಿದ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಜತೆಗೆ ತೆರಿಗೆ ವಿನಾಯಿತಿ ನೀಡಿದೆ. ಅದೇ ಸಾಮಾನ್ಯಜನ ಬಳಕೆ ಮಾಡುವ ಎಲ್ಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ಆದೂ ಸಾಲದೇ ಎಲ್ಲವನ್ನು ಖಾಸಗಿಕರಣಕ್ಕೆ ಮುಂದಾಗಿದ್ದಾರೆ ಎಂದರು. ಕಾಪೋರ್ರೇಟ್​ ಕಂಪನಿಗಳಿಗೆ ಸಹಕಾರಿಯಾಗುವಂತೆ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಅದೇ ಮಾರ್ಗವನ್ನು ರಾಜ್ಯ ರಾಜ್ಯ ಸರ್ಕಾರವು ಅನುಸರಿಸುತ್ತಿದೆ. ಹಾಲಿನ ತೆರಿಗೆ ಏರಿಕೆ ಮಾಡಿ ಜನರಿಂದ ಸುಲಿಗೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಬದಲಿಗೆ ಕೆಎಂಎಫ್​ ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದರೆ ಅದರಿಂದಲೇ ಹಾಲಿನ ದರವನ್ನು ಪ್ರೋತ್ಸಾಹಿಸಬಹುದು. ಈ ರೀತಿಯ ಸುಧಾರಣೆಗಳನ್ನು ತರದೇ ಹಾಲಿನ ಮೇಲೆ ತೆರೆಗೆ ಹಾಕುವುದು ಎಷ್ಟು ಸಮಂಜಸ ಎಂದರು.

ಕಾಪೋರ್ರೇಟ್​ ಕಂಪನಿಗಳಿಗೆ ಸಹಕಾರಿ : ಸರ್ಕಾರವು ರಾಜ್ಯದ ಜನತೆಗೆ ಉಚಿತ ಯೋಜನೆಗಳನ್ನು ಕೊಟ್ಟಿದೆ. ಇದರಿಂದ ಕೆಲವು ಜನರಿಗೆ ಅನುಕೂಲವಾಗಿದೆ ನಿಜ, ಆದರೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಕಿತ್ತುಕೊಳ್ಳುವುದು ಏನು ಪ್ರಯೋಜನ ಎಂದು ಸರ್ಕಾರವನ್ನು ಸಿಪಿಐಎಂ ತಾಲೂಕು ಕಾರ್ಯದರ್ಶಿ ರುದ್ರಾರಾಧ್ಯ ತರಾಟೆಗೆ ತೆಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net