

ಹುಣಸೂರು: ವಿವಿಧ ಕಾರಣಗಳಿಂದ ಅಳಿವಿನಲ್ಲಿರುವ ಪಕ್ಷಿ ಸಂಕುಲವನ್ನು ಉಳಿಸಿ ಬೆಳೆಸಬೇಕಿದೆ ಎಂದು ರಂಗನತಿಟ್ಟು ಪಕ್ಷಿಧಾಮದ ಪಕ್ಷಿವೀಕ್ಷಕ ಪ್ರವೀಣ್ ಜೇವರ್ಗಿ ಅಭಿಪ್ರಾಯಪಟ್ಟರು.
ಅರಣ್ಯ ಇಲಾಖೆ(ಸಾಮಾಜಿಕ ವಿಭಾಗ) ವತಿಯಿಂದ ರಾಷ್ಟ್ರೀಯ ಪಕ್ಷಿದಿನದ ಅಂಗವಾಗಿ ನಗರದ ಸರ್ಕಾರಿ ಬಾಲಕಿಯರ ಮತ್ತು ಬಾಲಕರ ಪದವಿಪೂರ್ವ ಕಾಲೇಜಿ ವಿದ್ಯಾರ್ಥಿಗಳಿಗೆ ಹುಣಸೂರು-ಮಡಿಕೇರಿ ಮುಖ್ಯರಸ್ತೆಯಲ್ಲಿರುವ ಕಲ್‌ಬೆಟ್ಟದ ಬಳಿ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ಸೋಮವಾರ ಆಯೋಜಿಸಿದ್ದ ಪಕ್ಷಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
2002ರ ಜ.5ರಂದು ಪಕ್ಷಿ ದಿನವನ್ನು ದೇಶದಲ್ಲಿ ಆರಂಭಿಸಲಾಯಿತು. ಪಕ್ಷಿಸಂಕುಲ ತನ್ನ ಅವಾಸಸ್ಥಾನಗಳನ್ನು ಕಳೆದುಕೊಂಡು ನಶಿಸುವ ಹಂತಕ್ಕೆ ಬಂದಿದೆ. ಪಕ್ಷಿಗಳನ್ನು ಬೇಟೆಯಾಡುವ ಪ್ರವೃತ್ತಿ, ವೃತ್ತಿ ಪಕ್ಷಿಗಳ ಅಳಿವಿಗೆ ಕಾರಣವಾಗುತ್ತಿದೆ. ವಿಶ್ವದಾದ್ಯಂತ ಪಕ್ಷಿದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತಿದೆ. ಪರಿಸರ ಸಮತೋಲನಕ್ಕೆ, ಪರಿಸರದ ಉಳಿವಿಗೆ ಪಕ್ಷಿಗಳು ಅವಶ್ಯಕ ಎಂದರು.
ಪಕ್ಷಿಗಳು ಮರದ ಹಣ್ಣನ್ನು ತಿಂದುಂಡು ನೆಲಕ್ಕೆ ಹಾಕುವ ಅಳಿದುಳಿದ ಹಣ್ಣಿನ ಬೀಜಗಳೇ ಮತ್ತೆ ಗಿಡಗಳಾಗಲಿವೆ. ವಿದ್ಯಾರ್ಥಿಗಳು ವಿವಿಧ ಬಣ್ಣದ ಪಕ್ಷಿಗಳನ್ನು ನೋಡುವ, ಅವುಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬೆಳೆಸಿಕೊಳ್ಳಬೇಕು. ಪಕ್ಷಿಗಳ ಕೂಗಿನಲ್ಲೂ ವಿವಿಧ ಅರ್ಥಗಳಿದ್ದು, ಅವುಗಳ ಅಧ್ಯಯನ ನಡೆಸಬೇಕಿದೆ ಎಂದರು.
ಜೀವ ವೈವಿಧ್ಯತೆಯಲ್ಲಿ ಪಕ್ಷಿಗಳ ಮಹತ್ವ ವಿಷಯದ ಕುರಿತು ಇದೇ ವೇಳೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಫರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಆರ್‌ಎಫ್‌ಒ ನಂದಕುಮಾರ್,ಎನ್ನೆಸ್ಸೆಸ್ಸ್ ಕಾರ್ಯಕ್ರಮ ಅಧಿಕಾರಿಗಳಾದ ಸಿ.ದೇವರಾಜು, ಚಂದ್ರಶೇಖರ್, ಸೋಮಶೇಖರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.