ಶಿಕ್ಷಕರ ಪರಿಶ್ರಮವೇ ವಿದ್ಯಾರ್ಥಿಗಳ ಏಳಿಗೆಯಾಗಿರಲಿ

26Manju7
ಬೆಳಗಾವಿಯ ನಾಗನೂರು ಪ್ರಭುದೇವ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರವನ್ನು ಡಾ.ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಎಂ.ಎಂ. ಕಾಂಬಳೆ, ಎಸ್.ಪಿ. ಹಿರೇಮಠ, ಬಸವರಾಜ ಹಣ್ಣೂರ, ಆರ್.ಜಿ. ಮಠ, ವೈ.ಎಂ. ಪಾಟೀಲ, ಸ್ವಪ್ನಾ ಜೋಶಿ ಇತರರಿದ್ದರು.
Published on

ಬೆಳಗಾವಿ: ಸರಳತೆ ಕಾರಣದಿಂದಲೇ ಶಿಕ್ಷಕ ಸಮಾಜದಲ್ಲಿ ಗೌರವದ ಸ್ಥಾನ ಪಡೆದುಕೊಂಡಿದ್ದಾರೆ. ಶಿಕ್ಷಕರ ಪರಿಶ್ರಮ ವಿದ್ಯಾರ್ಥಿಗಳ ಏಳಿಗೆಯಲ್ಲಿ ಅಡಗಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ನಾಗನೂರು ಪ್ರಭುದೇವ ಸ್ವತಂತ್ರ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಗುರುವಾರ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಉಪನ್ಯಾಸಕರಿಗಾಗಿ ಹಮ್ಮಿಕೊಂಡಿದ್ದ ಆಂಗ್ಲ ಭಾಷೆ ಮತ್ತು ವಿಜ್ಞಾನ ವಿಷಯಗಳ ಪುನಶ್ಚೇತನ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಹೆಸರಾಂತ ವೈದ್ಯ, ಇಂಜಿನಿಯರ್ ಸೇರಿದಂತೆ ಪ್ರಖ್ಯಾತ ವಿಜ್ಞಾನಿಗಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರವೇ ಹಿರಿದಾಗಿದೆ. ಸ್ವತಃ ಎಣ್ಣೆ, ಬತ್ತಿಯಂತೆ ಉರಿದು ಜ್ಞಾನದ ಬೆಳಕು ಹರಿಸುವ ಶಿಕ್ಷಕರು ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಉಳಿದಿದ್ದಾರೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಎಂ. ಕಾಂಬಳೆ ಮಾತನಾಡಿ, ಪ್ರಾಧ್ಯಾಪಕರು ತಮ್ಮ ವೃತ್ತಿ ಗೌರವವನ್ನು ಎತ್ತಿ ಹಿಡಿಯುವ ಕಾರ್ಯ ನಿರಂತರವಾಗಿ ಮಾಡಬೇಕು ಎಂದರು.

ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಹಿರೇಮಠ, ಪದವಿಪೂರ್ವ ಕಾಲೇಜುಗಳ ಮಹಾಮಂಡಳ ಅಧ್ಯಕ್ಷ ಬಸವರಾಜ ಹಣ್ಣೂರ, ಉಪನ್ಯಾಸಕರ ಸಂಘದ ಉಪಾಧ್ಯಕ್ಷ ಆರ್.ಜಿ. ಮಠ, ಪ್ರಾಚಾರ್ಯರ ಸಂಘದ ಕಾರ್ಯದರ್ಶಿ ವೈ. ಎಂ. ಪಾಟೀಲ, ಕಾಲೇಜಿನ ಪ್ರಾಚಾರ್ಯ ಸಿದ್ದರಾಮ ರೆಡ್ಡಿ, ವಿಜ್ಞಾನ ವಿಭಾಗದ ಪ್ರಾಚಾರ್ಯ ಸ್ವಪ್ನಾ ಜೋಶಿ, ದೈಹಿಕ ನಿರ್ದೇಶಕ ಪಿ. ಡಿ. ಶಿವನಾಯಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net