ಮನುಷ್ಯನ ದುರಾಸೆಗೆ ಭೂಮಿ ಬಲಿಯಾಗದಿರಲಿ

FotoJet (3)
Published on

ತಿಪಟೂರು: ಭೂಮಿ ಮನುಷ್ಯನ ಆಸೆಗಳನ್ನು ಪೂರೈಸಬಲ್ಲದು, ದುರಾಸೆಗಳನ್ನಲ್ಲ ಎಂದು ಪ್ರಾಂಶುಪಾಲ ಎಂ.ಡಿ.ಶಿವಕುಮಾರ್​ ಹೇಳಿದರು.

ನಗರದ ಗುರುಕುಲ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಆಯೋಜಿಸಿದ್ದ ಸಾಹಿತ್ಯ ಪರಿಷತ್​ನ ನಡೆ ಯುವಜನತೆಯ ಕಡೆೆ ಕಾರ್ಯಕ್ರಮದಲ್ಲಿ ಇರುವುದೊಂದೇ ಭೂಮಿ ವಿಷಯದ ಬಗ್ಗೆ ಮಾತನಾಡಿ, ಮಹಾತ್ಮ ಗಾಂಧಿ ಉಕ್ತಿಯಂತೆ ಜೀವಜಂತುಗಳಿಗೆಲ್ಲ ಇರುವುದೊಂದೇ ಭೂಮಿ. ಜನಸಂಖ್ಯೆ ಹೆಚ್ಚುತ್ತಾ ಹೋದಂತೆ ಭೂಮಿ ಬೆಳೆಯುವುದಿಲ್ಲ. ಆದ್ದರಿಂದ ನಾವು ಬದುಕುತ್ತಿರುವ ಈ ಭೂಮಿ ವಾಸಕ್ಕೆ ಯೋಗ್ಯವಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮದು ಎಂದರು.

ಮಿತಿ ಮೀರಿದ ಜನಸಂಖ್ಯಾ ಸ್ಫೋಟ, ನಗರೀಕರಣ, ಕೈಗಾರೀಕರಣ, ಅರಣ್ಯನಾಶ, ಜೈವಿಕ ಅಸಮತೋಲನ, ಪ್ಲಾಸ್ಟಿಕ್​ ಬಳಕೆ, ಇತ್ಯಾದಿ ಕಾರಣಗಳಿಂದಾಗಿ ಭೂಮಿ ಮಾನವ ಬದುಕಿಗೆ ಅಸಹನೀಯವಾಗಿ ಮಾರ್ಪಡುತ್ತಿದೆ. ಭವಿಷ್ಯದ ಪೀಳಿಗೆಯ ಉತ್ತಮ ಬದುಕಿಗೆ ಹೆಚ್ಚು ಗಿಡ, ಮರಗಳನ್ನು ನೆಟ್ಟು ಪೋಷಿಸುವ ಮೂಲಕ ಭೂಮಿಯನ್ನು ರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಎಂ.ಬಸವರಾಜಪ್ಪ ಮಾತನಾಡಿ, ಇದುವರೆಗೂ ಹತ್ತಕ್ಕೂ ಹೆಚ್ಚು ಶಾಲಾ, ಕಾಲೇಜುಗಳಲ್ಲಿ ಈ ರೀತಿಯ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಯುವ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಕಾರ್ಯ ನಿರಂತರವಾಗಿ ಮುಂದುವರಿಯಲಿದೆ ಎಂದರು. ಕೆಂಪಯ್ಯ ಮಾತನಾಡಿ, ಸಾಹಿತ್ಯ ಪರಿಷತ್​ನ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ನಾಡು, ನುಡಿಯ ಬಗ್ಗೆ ಅಭಿಮಾನ, ಸಾಹಿತ್ಯದ ಅಭಿರುಚಿ ಹೆಚ್ಚುತ್ತದೆ ಎಂದರು.

ಕಳೆದ ಶೈಕ್ಷಣಿಕ ವರ್ಷದಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ಏಳು ವಿದ್ಯಾರ್ಥಿಗಳನ್ನು ರೋಟರಿ ಅಧ್ಯಕ್ಷೆ ವನಿತಾಪ್ರಸನ್ನ ಸನ್ಮಾನಿಸಿದರು.

ತಿಪಟೂರು ಜಾಗೃತ ನಾಗರಿಕ ವೇದಿಕೆ ಅಧ್ಯಕ್ಷ ರೇಣುಕಾರಾಧ್ಯ, ಪ್ರಾಂಶುಪಾಲ ಎಂ.ಡಿ.ಶಿವಕುಮಾರ್​, ಮೂರ್ತಿ, ಉಪನ್ಯಾಸಕ ಯೋಗಾನಂದ್​, ಡಾ.ಪಿ.ಶಂಕರಪ್ಪ, ಟಿ.ಸಿ.ಗೋವಿಂದರಾಜು. ಎಚ್​.ಎಸ್​.ಮಂಜಪ್ಪ, ಉಷಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net