ಪ್ರೊ.ಮುಜಾಫರ್ ಅಸ್ಸಾದಿ ಕನಸು ಸಾಕಾರಗೊಳ್ಳಲಿ : ಪ್ರೊ.ಎನ್.ಕೆ.ಲೋಕನಾಥ್

11
Published on

ಮೈಸೂರು: ರಾಜಕೀಯ, ಸಾಮಾಜಿಕ ನ್ಯಾಯ, ದಲಿತ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪ್ರೊ.ಮುಜಾಫರ್ ಅಸ್ಸಾದಿ ಅವರ ಕನಸುಗಳನ್ನು ಸಾಕಾರಗೊಳಿಸುವ ಕಾರ್ಯ ಆಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಭಿಪ್ರಾಯಪಟ್ಟರು.

ಮೈಸೂರು ವಿವಿ ರಾಜ್ಯಶಾಸ್ತ್ರ ವಿಭಾಗದಿಂದ ಸೋಮವಾರ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರೊ.ಮುಜಾಫರ್ ಅಸ್ಸಾದಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮಾಜಿಕ ಕಳಕಳಿ ಹೊಂದಿದ್ದ ಪ್ರೊ.ಮುಜಾಫರ್ ಅಸ್ಸಾದಿ ಅವರು ರಾಜಕೀಯ ವಿಶ್ಲೇಷಕರಾಗಿದ್ದರು. ಸಾಮಾಜಿಕ ನ್ಯಾಯ, ದಲಿತ, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಹೀಗಾಗಿ ಹಲವು ಸುಧಾರಣಾ ಕ್ರಮಗಳನ್ನು ಸರ್ಕಾರದ ಮಟ್ಟದವರೆಗೂ ಮುಟ್ಟಿಸಿದ್ದಾರೆ. ಈಗ ಅವುಗಳನ್ನು ಕಾರ್ಯ ರೂಪಕ್ಕೆ ತರುವ ನಿಟ್ಟಿನಲ್ಲಿ ಮತ್ತು ಅವರ ಕೊಡುಗೆಗಳನ್ನು ನೆನಪಿಸುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬೇಕು. ಇದಕ್ಕೆ ಅಧ್ಯಯನ ಕಡೆಗೆ ಹೆಚ್ಚು ಗಮನಹರಿಸಬೇಕು ಎಂದು ಸಲಹೆ ನೀಡಿದರು.

ದಲಿತ ದೌರ್ಜನ್ಯ ಮತ್ತು ರೈತರ ಆತ್ಮಹತ್ಯೆಗಳ ಕುರಿತು ಅವರು ಮಾಡಿದ ಭಾಷಣ ಪ್ರಭಾವ ಬೀರಿತ್ತು. ರೈತರ ಮೇಲೆ ಅಪಾರ ಕಾಳಜಿ ಹೊಂದಿದ್ದರು. ಕಷ್ಟದಲ್ಲಿರುವ ರೈತರಿಗೆ ಸಹಾಯ ಮಾಡಲು ಸರ್ಕಾರಕ್ಕೆ ಸಲಹೆ ಕೊಡುತ್ತಿದ್ದರು. ಅಸ್ಸಾದಿ ಅವರು ನಮ್ಮನ್ನು ಅಗಲಿರಬಹುದು. ಆದರೆ ಅವರು ಮಾಡಿರುವ ಕೆಲಸಗಳು ಸದಾ ನಮ್ಮೊಂದಿಗೆ ಇರಲಿವೆ ಎಂದರು.

ಅಸ್ಸಾದಿ ಅವರು ಖ್ಯಾತ ಶಿಕ್ಷಣ ತಜ್ಞ, ರಾಜಕೀಯ ವಿಜ್ಞಾನಿ, ಸಾಮಾಜಿಕ ಚಿಂತರಾಗಿದ್ದರು. ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದರು. 300ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಮಂಡಿಸಿದ್ದು, 14 ಕೃತಿಗಳನ್ನು ರಚಿಸಿದ್ದಾರೆ ಎಂದರು.

ನಾನು ಅವರೊಂದಿಗೆ ಮಲೆನಾಡ ಕುರಿತು ಕರಾವಳಿ ಕನ್ನಡದಲ್ಲಿ ಮಾತನಾಡುತ್ತಿದ್ದೆವು. ಕನ್ನಡ ಪದಪುಂಜಗಳೇ ಅವರಲಿತ್ತು. ಕೆಲ ಪದಗಳನ್ನು ಪುಸ್ತಕಗಳಲ್ಲಿ ಬಳಸಿದ್ದಾರೆ. ನಗುಮೊಗದ ಅಸ್ಸಾದಿ ಅವರು ಬೇಸರ ಮಾಡಿಕೊಂಡಿದ್ದನ್ನು ಕಂಡಿರಲಿಲ್ಲ. ಎಲ್ಲರೊಂದಿಗೆ ಹೊಂದಿಕೊಂಡು ಹೋಗುತ್ತಿದ್ದರು ಎಂದರು.

ಪ್ರಾಧ್ಯಾಪಕಿ ಶಬೀನಾ ಮಾತನಾಡಿ, ಪ್ರೊ.ಮುಜಾಫರ್ ಅಸ್ಸಾದಿ ಅವರ ನಿಧನ ಮುಸ್ಲಿಂ ಸಮುದಾಯಕ್ಕೆ ಆದ ದೊಡ್ಡ ಅಘಾತ. ಈಗಲಾದರೂ ಮುಸ್ಲಿಂ ಸಮುದಾಯದವರು ಅವರ ಪುಸ್ತಕಗಳನ್ನು ಓದಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ಕೃಷ್ಣ ಹೊಂಬಾಳ್, ಪ್ರಾಧ್ಯಾಪಕರಾದ ಪೊ.ಜಿ.ಟಿ.ರಾಮಚಂದ್ರಪ್ಪ, ಡಾ.ಸಿ.ಎಲ್.ಸೋಮಶೇಖರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net