ಸಮಗ್ರ ಅಭಿವೃದ್ಧಿಯ ಕನಸು ಸಾಕಾರಗೊಳ್ಳಲಿ

ITIHASA
Published on

ಕುಮಟಾ: ಉತ್ತರ ಕನ್ನಡ ಜಿಲ್ಲೆಗೂ ಅತ್ಯಂತ ಶ್ರೀಮಂತ ಇತಿಹಾಸವಿದೆ. ಜಿಲ್ಲೆಯ ಅನೇಕ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನಗಳು ಸ್ಮರಣೀಯವಾಗಿವೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಉತ್ತರ ಕನ್ನಡ ಜಿಲ್ಲೆಯ ಪಾತ್ರ ವಿಷಯವಾಗಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಕಾಲೇಜಿನ ಐಕ್ಯುಎಸಿ, ಇತಿಹಾಸ ವಿಭಾಗ, ಇತಿಹಾಸ ಸಂಘ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ರಾಜ್ಯ ಪತ್ರಗಾರ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಇತಿಹಾಸ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜಿಲ್ಲೆಯ ಸಮಗ್ರ ಇತಿಹಾಸವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಇದರಿಂದ ಇತಿಹಾಸದ ಅಭಿಮಾನದ ಕ್ಷಣಗಳ ಅರಿವಿನ ಜತೆಗೆ ಭವಿಷ್ಯದ ಪ್ರೇರಣೆಯೂ ಸಿಗುತ್ತದೆ. ಉತ್ತರ ಕನ್ನಡ ಬಹಳ ಹಿಂದುಳಿದ ಜಿಲ್ಲೆಯಾಗಿದ್ದು, ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯುವ ಪ್ರಯತ್ನವನ್ನು ನಿರಂತರ ಮಾಡುತ್ತಿದ್ದೇವೆ. ಬೆಳಗಾವಿ ಅಧಿವೇಶನದಲ್ಲೂ ಸಾಕಷ್ಟು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ನಾನು ಯಾವತ್ತೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಿದ್ದು ಸರ್ವತೋಮುಖ ಅಭಿವೃದ್ಧಿಯ ಕನಸು ಸಾಕಾರಗೊಳ್ಳಬೇಕಿದೆ ಎಂದರು.

ಕಾಲೇಜಿನ ಪ್ರಾಚಾರ್ಯೆ ವಿಜಯಾ ಡಿ. ನಾಯ್ಕ, ಸಂಚಾಲಕ ಪ್ರೊ. ಪ್ರಮೋದ ಹೆಗಡೆ, ಸಹಸಂಚಾಲಕ ಪ್ರೊ. ಕೃಷ್ಣ ನಾಯ್ಕ, ಡಾ. ಸಂದೇಶ ಎಚ್., ಎಸ್. ವೈ.ಮುಗುಳಿ, ಶ್ರೀಧರ ಎಸ್. ಹೆಗಡೆ, ಡಾ. ಗೀತಾ ನಾಯ್ಕ, ಡಾ. ವಿ.ಎಂ. ನಾಯ್ಕ, ಡಾ. ಐ.ಕೆ. ನಾಯ್ಕ, ಪ್ರೊ. ವಿನಾಯಕ ನಾಯಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಣೇಶ ಪಟಗಾರ, ಮಮತಾ ಮರಾಠಿ, ವಿಕಾಸ ನಾಯ್ಕ ಇತರರು ಇದ್ದರು. ಸಮ್ಮೇಳನದಲ್ಲಿ ತಾಲೂಕಿನ ರಾಜಕೀಯ ಇತಿಹಾಸ, ತಾಲೂಕಿನ ಮೂರ್ತಿ ಶಿಲ್ಪ ಹಾಗೂ ವಾಸ್ತುಶಿಲ್ಪ, ಉತ್ತರ ಕನ್ನಡದಲ್ಲಿ ಸ್ವಾತಂತ್ರ್ಯ ಸಂಗ್ರಾಮ, ತಾಲೂಕಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಷಯ ಮಂಡಿಸಿದರು. ಲಕ್ಷ್ಮಣ ಪಟಗಾರ ಅವರಿಂದ ಜಾದೂ ಪ್ರದರ್ಶನ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net