ಶರಣರು, ಸಂತರ ಕಾಯಕ ನಿಷ್ಠೆ ಪ್ರೇರಣೆಯಾಗಲಿ

25NRGL2
Published on

ನರೇಗಲ್ಲ: ಬದುಕಿನ ಒತ್ತಡಕ್ಕೆ ಒಳಗಾಗಿರುವ ಮಾನವನಿಗೆ ಧಾರ್ವಿುಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸಿನ ನೆಮ್ಮದಿ ಹೆಚ್ಚಿಸಿ ಆಹ್ಲಾದಕರ ವಾತಾವರಣ ನಿರ್ವಿುಸುತ್ತವೆ. ನಾಡಿನ ಅನೇಕ ಶರಣರು, ಸಂತರು, ದಾರ್ಶನಿಕರು ಹಾಗೂ ಶ್ರೀಗಳ ಕಾಯಕ ನಿಷ್ಠೆಯನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಮನಸಿನ ಹತೋಟಿಯಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಗಜೇಂದ್ರಗಡದ ಟಕ್ಕೇದ ದರ್ಗಾದ ಹಜರತ್ ಸೈಯ್ಯದ ನಿಜಾಮುದ್ದೀನ್ ಶಾ ಅರ್ಷದ್ ಹೇಳಿದರು.

ಸಮೀಪದ ನಿಡಗುಂದಿ ಗ್ರಾಮದ ಶ್ರೀ ಕುಮಾರೇಶ್ವರ ಬಿಲ್ವ ಪತ್ರೆ ವನದಲ್ಲಿ ಆಯೋಜಿಸಿದ್ದ ಶಿವಾನುಭ ಸಂಪದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ನಮ್ಮ ಕಣ್ಣಿನ ದೃಷ್ಟಿಕೋನ ಸರಿಯಿಲ್ಲದಿದ್ದರೆ ಸಾಕಷ್ಟು ಅವಘಡಗಳಿಗೆ ಕಾರಣವಾಗುತ್ತದೆ. ದೇಹದ ಹೆಬ್ಬಾಗಲಾಗಿರುವ ಕಣ್ಣನ್ನು ಹತೋಟಿಯಲ್ಲಿಟ್ಟು ಕೊಳ್ಳಬೇಕಾದರೆ ಮೊದಲು ಮನಸು ಜಾಗೃತವಾಗಿರಬೇಕು. ಚಂಚಲ ಮನಸನ್ನು ಸ್ತಿಮಿತದಲ್ಲಿಟ್ಟುಕೊಳ್ಳಲು ಧ್ಯಾನ, ಯೋಗ, ಭಕ್ತಿ ಅಗತ್ಯ. ಗದುಗಿನ ಪಂಡಿತ ಪುಟ್ಟರಾಜ ಕವಿ ಗವಾಯಿಗಳಿಗೆ ಕಣ್ಣು ಇಲ್ಲದಿದ್ದರೂ ಅಂತರ ಆತ್ಮ ಜ್ಞಾನಿಗಳಾಗಿ ಕಣ್ಣುಗಳಿಲ್ಲದ ಅನೇಕ ಬಡ, ಅಂದ ಮಕ್ಕಳಿಗೆ ಶಿಕ್ಷಣ ನೀಡಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.

ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತರನ್ನು ಪ್ರತಿನಿತ್ಯ ಸ್ಮರಿಸುವ ಮೂಲಕ ನಮ್ಮೆಲ್ಲ ಕೆಲಸ ಪ್ರಾರಂಭಿಸಬೇಕು. ಪ್ರತಿಯೊಬ್ಬ ಪ್ರಜೆಯೂ ಯಾವುದಾದರೂ ರೂಪದಲ್ಲಿ ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು. ಜನ್ಮ ಸಾರ್ಥಕವಾಗಬೇಕಾದರೆ ಸತ್ಯ, ಪ್ರಾಮಾಣಿಕತೆಯ ಹಾದಿಯಲ್ಲಿ ಸಾಗಬೇಕು. ಬಸವಾದಿ ಶರಣರ ಮಾರ್ಗದಲ್ಲಿ ಬದುಕಿನ ಶ್ರೇಷ್ಠತೆ ಕಂಡುಕೊಳ್ಳಲು ಶ್ರಮಿಸಬೇಕು. ಗುರುವಿನ ಮಾಗದರ್ಶನದಿಂದ ಯಶಸ್ವಿ ಜೀವನ ನಡೆಸಬಹುದು ಎಂದರು.

ನಿಡಗುಂದಿ ಧರ್ಮರಮಠದ ಷಣ್ಮುಖಪ್ಪಜ್ಜ ಸಮ್ಮುಖ ವಹಿಸಿದ್ದರು. ಡಾ. ಕೆ.ಬಿ. ಧನ್ನೂರ, ಕಸ್ತೂರಿ ಧನ್ನೂರ ಅವರನ್ನು ಸನ್ಮಾನಿಸಲಾಯಿತು. ವೀರನಗೌಡ ಪಾಟೀಲ, ಡಾ. ಆರ್.ಕೆ. ಗಚ್ಚಿನಮಠ, ಶಂಕ್ರಪ್ಪ ರೊಟ್ಟಿಗವಾಡ, ಶರಣಯ್ಯ ಮಠಪತಿ, ಪರಪ್ಪ ಅಣಗೌಡ್ರ, ಸಂಗಯ್ಯ ಭೂಸನೂರಮಠ, ವೀರಣ್ಣ ಪರಮಣ್ಣವರ, ಅಂದಪ್ಪ ಬಿಚ್ಚೂರ, ಗದಗಯ್ಯ ಗುರುಸ್ಥಳಮಠ, ಚೇತನ ಅಣಗೌಡ್ರ, ನಬೀಸಾಬ ಕೊಟ್ಟಿಕಲ್ಲ, ಬಸವರಾಜ ಅಣಗೌಡ್ರ, ಇತರರಿದ್ದರು. ಬಸವರಾಜ ಜಂಗಣ್ಣವರ, ಶರಣಪ್ಪ ಅರಮನಿ ಸಂಗೀತ ಸೇವೆ ನೀಡಿದರು. ಗ್ರಾಮದ ಅಕ್ಕಮಹಾದೇವಿ ಮಹಿಳಾ ಮಂಡಳ ಸದಸ್ಯರು ಪ್ರಾರ್ಥಿಸಿದರು. ಡಿ.ಎಸ್. ಬಡಿಗೇರಿ ನಿರೂಪಿಸಿದರು. ಎ.ಎಸ್. ಗೇದಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net