ಮಾಚಿದೇವರ ಆಚಾರ, ವಿಚಾರ ಮೈಗೂಡಿಸಿಕೊಳ್ಳಲಿ

SDP MACHIDEV
Published on

ಸಿದ್ದಾಪುರ: ವಚನ ಸಾಹಿತ್ಯದಿಂದ ಸಮಾಜದ ಅನಿಷ್ಟಗಳನ್ನು ಹೋಗಲಾಡಿಸಿದವರು ಮಾಚಿದೇವರು. ಮಾಚಿದೇವರಿಂದ ಬಸವಾದಿ ಶರಣರ ವಚನಗಳ ಭಂಡಾರವನ್ನು ಇಂದು ನಾವು ಓದುವಂತಾಗಿದೆ. ವೀರಭದ್ರ ದೇವರ ಅವತಾರ ಪುರುಷ ದೈವಿಸಂಭೂತ ಮಾಚಿದೇವರ ಆಚಾರ, ವಿಚಾರಗಳನ್ನು ಇಂದಿನ ಜನತೆ ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಂ.ಆರ್. ಕುಲಕರ್ಣಿ ಹೇಳಿದರು.

ಸ್ಥಳೀಯ ತಾಲೂಕಾಡಳಿತ ಸಭಾಭವನದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಪಪಂ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಪಂ ಇಒ ದೇವರಾಜ ಹಿತ್ತಲಕೊಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಚಿದೇವರ ವಿಚಾರಧಾರೆಗಳು ಮಡಿವಾಳ ಸಮುದಾಯಕ್ಕೆ ಮಾತ್ರ ಸೀಮಿತವಾಗಿರದೆ ಎಲ್ಲ ಸಮುದಾಯದವರಿಗೂ ಅವಶ್ಯಕತೆ ಇದೆ. ಎಲ್ಲ ಸಮುದಾಯದ ಗುರುಗಳ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರು ಭಾಗವಹಿಸಿದಾಗ ಮಾತ್ರ ಕಾರ್ಯಕ್ರಮಗಳು ಯಶಸ್ವಿಯಾಗುತ್ತದೆ ಎಂದರು.

ಕೋಲಸಿರ್ಸಿ ಸರ್ಕಾರಿ ಪದವಿಪೂರ್ವ ಕಾಲೇಜ್ ಉಪನ್ಯಾಸಕ ಮಂಜಪ್ಪ ಎಂ.ಜಿ. ಮಾಚಿದೇವರ ಕುರಿತು ಉಪನ್ಯಾಸ ನೀಡಿದರು.

ತಾಲೂಕು ನಾಮಧಾರಿ ಸಮಾಜದ ಉಪಾಧ್ಯಕ್ಷ ಕೆ.ಜಿ. ನಾಗರಾಜ, ಹವ್ಯಕ ಮಹಾಮಂಡಲ ತಾಲೂಕಾಧ್ಯಕ್ಷ ಮಹೇಶ ಭಟ್ಟ ಚಟ್ನಳ್ಳಿ,

ಮಡಿವಾಳ ಸಮಾಜದ ತಾಲೂಕಾಧ್ಯಕ್ಷ ಪಿ.ಬಿ. ಹೊಸೂರ, ವೀರಶೈವ ಲಿಂಗಾಯತ ಸಮಾಜದ ಸಿ.ಎಸ್. ಗೌಡರ್, ಪಪಂ ಉಪಾಧ್ಯಕ್ಷ ವಿನಯ ಹೊನ್ನೆಗುಂಡಿ, ಮಡಿವಾಳ ಸಮಾಜದ ಪ್ರಮುಖರು, ಇತರರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಪಲ್ಲವಿ ಗೋಪಾಲ ಅಪ್ಪಿನಬೈಲ್, ಸ್ವಪ್ನ ಪಾಂಡುರಂಗ ನಾಯ್ಕ ಅರೇಂದೂರ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕೆ.ಟಿ. ಹೊನ್ನೆಗುಂಡಿ, ಸಂಗೀತಾ ಭಟ್ಟ, ಶಾಮಸುಂದರ ನಾಯ್ಕ, ಚಂದನ ಶಿವಕುಮಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net