ಅನ್ನದಾತನಿಗೆ ತ್ವರಿತ ನ್ಯಾಯ ಸಿಗಲಿ

May the breadwinner get speedy justice.
ಮುಧೋಳ ನಗರದ ಡಾ. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಉದ್ಘಾಟನಾ ಸಮಾರಂಭ ಜರುಗಿತು. ಕಾನೂನು ಸಚಿವ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಪೂರ, ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ. ಸಂದೇಶ ಇದ್ದರು.
Published on

ಮುಧೋಳ: ಕಕ್ಷಿದಾರರಿದ್ದರೆ ಮಾತ್ರ ವಕೀಲರು ಮತ್ತು ನ್ಯಾಯಾಧೀಶರು, ಹಸಿವು ನೀಗಿಸುವ ಅನ್ನದಾತನಿಗೆ ತ್ವರಿತವಾಗಿ ನ್ಯಾಯದಾನ ಸಿಗಬೇಕು ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರೂ ಆದ ಬಾಗಲಕೋಟೆ ಆಡಳಿತಾತ್ಮಕ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಹೇಳಿದರು.

ನಗರದ ಡಾ. ಅಂಬೇಡ್ಕರ್ ಮತ್ತು ಡಾ. ಬಾಬು ಜಗಜೀವನ ರಾಮ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಏಳು ಕೋರ್ಟ್‌ಗಳ ಬೇಡಿಕೆಯಿತ್ತು. ಈಗ ನಾಲ್ಕು ಕೋರ್ಟ್‌ಗಳ ಬೇಡಿಕೆ ಈಡೇರಿಸಲಾಗಿದೆ ಎಂದರು.

ರಾಜ್ಯದಲ್ಲಿ ಯಾವುದೇ ನ್ಯಾಯಾಧೀಶರು ಬಾಡಿಗೆ ಮನೆಯಲ್ಲಿ ಇರಬಾರದು. ಪೊಲೀಸ್ ಇಲಾಖೆ ಅಧೀನದಲ್ಲಿರುವ ಇಪ್ಪತ್ತೇಳು ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಜಮೀನನ್ನು ನ್ಯಾಯಾಂಗಕ್ಕೆ ನೀಡಬೇಕೆಂದು ಕಾನೂನು ಸಚಿವರಲ್ಲಿ ಮನವಿ ಮಾಡಿದರು.

ವಕೀಲರು ಬಡವ, ಬಲ್ಲಿದರ, ನೊಂದವರ ಧ್ವನಿಯಾಗಿರಬೇಕು. ಸ್ವಾತಂತ್ರ್ಯಕ್ಕಾಗಿ ವಕೀಲರು ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಭೂಸ್ವಾದೀನ, ಅಪಘಾತ ಪ್ರಕರಣಗಳಲ್ಲಿ ಕಕ್ಷಿದಾರರ ಶೋಷಣೆ ಹೆಚ್ಚಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಂವಿಧಾನ ರಚಿಸಲು ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಶ್ರಮಿಸಿದ್ದಾರೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡಲಾಗಿದ್ದು, ಅವುಗಳ ಸಮಪರ್ಕ ಬಳಕೆ ಆಗಬೇಕು ಎಂದರು.

ಸಂಸದೀಯ ವ್ಯವಹಾರಗಳು ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ಈಗಾಗಲೆ ನೂತನ ಕಾನೂನು ಜಾರಿಗೆ ತರಲಾಗಿದೆ. ನ್ಯಾಯಾಧೀಶರು ಅವುಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಮುಂದಾಗಬೇಕು. ಸಮಾಜದಲ್ಲಿ ಬದಲಾವಣೆ ತರಲು ನ್ಯಾಯಾಧೀಶರು, ವಕೀಲರು ಮತ್ತು ರಾಜಕಾರಣಿಗಳನ್ನು ಹೊರತುಪಡಿಸಿ ರೈತರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದಾಗ ಮಾತ್ರ ಸಾಧ್ಯ ಎಂದರು.

ನಾಲ್ಕು ಎಕರೆ ಜಮೀನನ್ನು ನ್ಯಾಯಾಲಯಕ್ಕೆ ನೀಡುವ ವಿಷಯದಲ್ಲಿ ಸರ್ಕಾರ ಸಹಕಾರ ನೀಡಲಿದೆ. ನ್ಯಾಯಾಲಯದ ಅಗತ್ಯ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್‌ನ ಒತ್ತಾಯದ ಸಾಲ ವಸೂಲಾತಿಯನ್ನು ತಡೆಯಲು ಕಾಯ್ದೆ ಜಾರಿಗೆ ತಂದಿರುವ ಕಾರ್ಯಕ್ಕಾಗಿ ಎಸ್.ಪಿ. ಅಮರ್ನಾಥ ರೆಡ್ಡಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಮಾತನಾಡಿ, ನ್ಯಾಯವಾದಿಗಳು, ವೈದ್ಯರು, ಎಂಜಿನಿಯರಿಂಗ್ ಪದವಿಗಳು ಸೇರಿದಂತೆ ಸಮಾಜದ ಎಲ್ಲ ರಂಗಗಳ ತಂತ್ರಗಳ ಬಗ್ಗೆ ಮಾಹಿತಿ ಪಡೆದು ಪರಿಣಿತರಾದಾಗ ಮಾತ್ರ ನ್ಯಾಯ ಕೇಳಲು ಬಂದ ನೊಂದವರ ಕಣ್ಣೀರು ಒರೆಸಲು ಸಾಧ್ಯ ಎಂದರು.

ನ್ಯಾಯಮೂರ್ತಿ ಟಿ.ಜಿ. ಶಿವಶಂಕರೇಗೌಡ, ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯ ಎಸ್.ವೈ. ವಟವಟಿ, ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ, ಎಸ್.ಪಿ. ಅಮರನಾಥ ರೆಡ್ಡಿ, ಮುಧೋಳ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕತ್ತಿ, ಬಾಗಲಕೋಟ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ, ಎನ್.ವಿ. ವಿಜಯ, ಕೆ.ಎಸ್. ಬೀಳಗಿ, ಕೆ. ದುರ್ಗಾದಾಸ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net