ಭಾವೈಕ್ಯದ ಬೆಸುಗೆ ಗಟ್ಟಿಯಾಗಿ ಉಳಿಯಲಿ

May the bond of passion remain strong
ತಾಳಿಕೋಟೆ ಪಟ್ಟಣದ ಮಹಲ್ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಕಾಳಗಿ ಫೀರಾ ದೇವರ ಸನ್ನಿಧಿಗೆ ಖಾಸ್ಗತೇಶ್ವರಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಭೇಟಿ ನೀಡಿದರು. ಇಮಾಮಸಾಬ ಕಾಳಗಿ, ಸೈಯದಶಕೀಲಅಹ್ಮದ ಖಾಜಿ, ಗಣಿಸಾಬ ಲಾಹೋರಿ ಇತರರಿದ್ದರು.
Published on

ತಾಳಿಕೋಟೆ: ಹಿಂದಿನ ಕಾಲದಿಂದಲೂ ಶ್ರೀಮಠದ ಮೇಲೆ ಪ್ರೀತಿ ವಾತ್ಸಲ್ಯ ತೋರುತ್ತ ಬಂದ ಮುಸ್ಲಿಮರ ನಡೆ ನುಡಿ ಬಹಳ ಆದರ್ಶಮಯವಾಗಿದೆ. ಹಿರಿಯರ ಮಾರ್ಗದರ್ಶನದಂತೆ ಪ್ರೀತಿ, ವಾತ್ಸಲ್ಯದಿಂದ ಮುಂದುವರಿಯುತ್ತೇವೆ ಎಂದು ಖಾಸ್ಗತೇಶ್ವರಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ನುಡಿದರು.

ಮೊಹರಂ ಹಬ್ಬದ ನಿಮಿತ್ತ ಪಟ್ಟಣದ ಮಹಲ್ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ ಕಾಳಗಿ ಫೀರಾ ದೇವರಿಗೆ ಹಾರ ಹಾಕಿ ಹಾಗೂ ದೇವರು ಹಿಡಿಯುವ ಇಮಾಮಸಾಬ ಕಾಳಗಿ ಅವರನ್ನು ಸನ್ಮಾನಿಸಿ ಸೋಮವಾರ ಅವರು ಮಾತನಾಡಿದರು.

ಹಿರಿಯರು ಹಾಕಿಕೊಟ್ಟ ಭಾವೈಕ್ಯದ ಬೆಸುಗೆ ಗಟ್ಟಿಯಾಗಿ ಉಳಿಯುವ ಕಾರ್ಯವಾಗಬೇಕು ಎಂಬುದು ನಮ್ಮ ಆಸೆಯಾಗಿದೆ. ಅದನ್ನು ಯುವಜನತೆ ಅರಿತು ಅನುಸರಿಸುವಂತಹ ಕಾರ್ಯವಾಗಬೇಕು ಎಂದರು.

ಮುಸ್ಲಿಂ ಧಾರ್ಮಿಕ ಮುಖಂಡ ಸೈಯದಶಕೀಲಅಹ್ಮದ ಖಾಜಿ ಮಾತನಾಡಿ, ಖಾಸ್ಗತರ ಮಠದೊಂದಿಗೆ ಹಿಂದಿನಿಂದಲೂ ಹಿರಿಯರು ಬಹಳ ಗೌರವದೊಂದಿಗೆ ನಡೆದುಕೊಳ್ಳುತ್ತ ಬಂದಿದ್ದಾರೆ. ಖಾಸ್ಗತೇಶ್ವರ ಜಾತ್ರೊತ್ಸವ ಹಾಗೂ ಮೊಹರಂ ಹಬ್ಬ ಎರಡೂ ಕೂಡಿ ಬಂದಿದ್ದು ನಾವೆಲ್ಲರೂ ಭಾವೈಕ್ಯದೊಂದಿಗೆ ಸಾಗುತ್ತೇವೆ ಎಂದರು.

ಶ್ರೀಗಳನ್ನು ಮುಸ್ಲಿಂ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಹಿರಿಯರಾದ ಗಣಿಸಾಬ ಲಾಹೋರಿ, ಹಸನಸಾಬ ಕೊರ್ಕಿ, ಖಾಜಾಹುಸೇನ ಕಟ್ಟಿ, ರಫೀಕ್ ಲಾಹೋರಿ, ನಬಿರಸೂಲ ಲಾಹೋರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net