

ಶಿರೋಳ: ಶರಣರು ಸರ್ವಸಂಘ ಪರಿತ್ಯಾಗಿಗಳಾಗಿ, ಲೌಕಿಕ, ಪಾರಮಾರ್ಥಗಳನ್ನು ಗೆದ್ದವರು. ಸಿರಿತನ ಬಂದರೆ ಮನಃಸ್ಥಿತಿ ಮತ್ತು ಪರಿಸ್ಥಿತಿ ಎರಡೂ ಬದಲಾಗುತ್ತವೆ ಎಂದು ಶಿರೋಳ ತೋಂಟದಾರ್ಯ ಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.
ತೋಂಟದಾರ್ಯ ಶಾಖಾ ಮಠದಲ್ಲಿ ಆಯೋಜಿಸಿರುವ 21ನೇ ದಿನದ ಬಸವ ಪುರಾಣ ಪ್ರವಚನದಲ್ಲಿ ಅವರು ಮಾತನಾಡಿ, ‘ಶರಣರ ಸತ್ಯನುಡಿಗಳು ಶರೀರದ ಬಂಡಿಯ ಕಡೇ ಗೀಲು ಇದ್ದ ಹಾಗೆ ಎನ್ನುವ ಮೂಲಕ ಮಾನವ ಶರೀರವನ್ನು ವಚನಗಳಲ್ಲಿ ಅರ್ಥೈಸಿದವರು ಬಸವಾದಿ ಶರಣರು. ಕಾಯವೇ ಭಗವಂತನಿಗೆ ಅರ್ಪಿತವಾಗಬೇಕು, ಆಸೆ ಎಂಬುದು ಅರಸಂಗಲ್ಲದೇ ಶಿವಭಕ್ತರಿಗೆ ಉಂಟೆ ಅಯ್ಯಾ...ಎನ್ನುವಂತೆ ವಚನಗಳಿಗೆ ಶ್ರೀಕಾರ ಹಾಕಿದವರು ದಾಸಿಮಯ್ಯ. ಸುರಗಿ ಚೌಡಯ್ಯ, ಮೋಳಿಗೆ ಮಾರಯ್ಯ, ಕೃಷಿ ಕಾಯಕದ ಇಳಿಹಾಳ ಬೊಮ್ಮಯ್ಯ ಕೂಡ ಅವರಂತೆಯೇ ರೈತ ಸಮುದಾಯದ ಆದರ್ಶ ಶರಣರಾಗಿದ್ದಾರೆ ಎಂದರು.
ಕಲ್ಯಾಣದಲ್ಲಿ ಸಾಮಾಜಿಕ ಕ್ರಾಂತಿಯ ಜ್ವಾಲೆ ಕಾಯಕ ದಾಸೋಹ ಮತ್ತು ವಚನ ರಚನೆಯ ಮೂಲಕ ಸರ್ವವ್ಯಾಪಿಯಾಗಿ ಪಸರಿಸಿದ್ದವು. ಸಾಂಸಾರಿಕರು ಎಂದಿಗೂ ಲೆಕ್ಕತಪ್ಪ ಬಾರದು, ಸನ್ಯಾಸಿಗಳು ಯಾವುದನ್ನೂ ಲೆಕ್ಕ ಇಡಬಾರದು ಎಂದು ತಿಳಿಸಿದರು.
ಪ್ರವಚನಕಾರ ಶಶಿಧರ ಶಾಸ್ತ್ರೀಗಳು ಹಿರೇಮಠ ಮಾತನಾಡಿದರು. ಬಾದಾಮಿ ತಾಲೂಕಿನ ಗೋವನಕೊಪ್ಪ ಗ್ರಾಮದಿಂದ ರೊಟ್ಟಿ, ಚಪಾತಿ, ಹೆಸರಕಾಳು, ಬದನೆಕಾಯಿ, ಪುಂಡಿ ಪಲ್ಲೆ, ಪುಟಾಣಿ ಚಟ್ನಿ, ಖಾರದಪುಡಿ, ಶೇಂಗಾ ಹೋಳಿಗೆ, ಬಾನ, ಅನ್ನ, ಸಾಂಬಾರ, ಪ್ರಸಾದ ಕಲ್ಯಾಣದ ದಾಸೋಹವನ್ನು ಸ್ಮರಿಸುವ ಬಸವ ಬುತ್ತಿಯೊಂದಿಗೆ ಮೂರು ಟ್ರ್ಯಾಕ್ಟರ್ಗಳಲ್ಲಿ ನೂರಕ್ಕೂ ಅಧಿಕ ಭಕ್ತರು ಆಗಮಿಸುವ ಮೂಲಕ ಬಸವ ಪುರಾಣದ ಮೂಲಕ ದಾಸೋಹದ ಮಹತ್ವ ಸಾರಿದರು.
ಗೋವನಕೊಪ್ಪ ಗ್ರಾಮದ ಚಂದ್ರಗೌಡ ಪಾಟೀಲ, ಕೆ.ಡಿ. ಬಿಜಾಪೂರ ಹನಮಂತಗೌಡ ಪಾಟೀಲ ಹಾಗೂ ದಾಸೋಹ ದಾನಿಗಳಾದ ಮಲ್ಲನಗೌಡ ಪಾಟೀಲ, ಶಾಂತಮ್ಮ ಗಡಗಿ, ರವೀಂದ್ರ ಶಾಲದಾರ ಅವರನ್ನು ಸತ್ಕರಿಸಲಾಯಿತು.
ತಿಪ್ಪಣ್ಣ ಮ್ಯಾದರ, ಹೇಮಣ್ಣ ನಿಂಗರಡ್ಡಿ, ಪವಾಡೆಪ್ಪ ಮಾಡಲಗೇರಿ, ದೇವೇಂದ್ರಪ್ಪ ಶಾಂತಗೇರಿ, ಸಿದ್ದಣ್ಣ ಹದ್ಲಿ, ಶಿವಲಿಂಗಪ್ಪ ಕುಪ್ಪಸ್ತ, ಚಂದ್ರಗೌಡ ಪಾಟೀಲ, ಸುರೇಶ ಕುಲಕರ್ಣಿ, ಗಂಗಯ್ಯ ವಸ್ತ್ರದ, ದುರಗಪ್ಪ ಮೂಲಿಮನಿ, ದ್ಯಾಮಣ್ಣ ಶಾಂತಗೇರಿ, ಇತರರಿದ್ದರು.