ಉತ್ತಮ ಆಯ್ಕೆ ಭವಿಷ್ಯದ ಗುರಿ ಸಾಧನೆಗೆ ಮೆಟ್ಟಿಲಾಗಲಿ

2ark1
Published on

ಅರಕಲಗೂಡು: ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ತೇರ್ಗಡೆ ಪ್ರಮಖ ಘಟ್ಟವಾಗಿದ್ದು, ಕಲಿಕೆಗೆ ಮುಂದೆ ತೆಗೆದುಕೊಳ್ಳುವ ಉತ್ತಮ ಆಯ್ಕೆ ಭವಿಷ್ಯದ ಗುರಿ ಸಾಧನೆಗೆ ಯಶಸ್ಸಿನ ಮೆಟ್ಟಿಲಾಗಬೇಕು ಎಂದು ಶಾಸಕ ಎ.ಮಂಜು ಸಲಹೆ ನೀಡಿದರು.


ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ 2023-24ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಗೆ ರೂಪಿಸಿದ್ದ ಎಸ್ಸೆಸ್ಸೆಲ್ಸಿ ಆದ್ಮೇಲೆ ಮುಂದೇನು? ಎಂಬ ವಿಷಯವಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರುವ ನಿಟ್ಟಿನಲ್ಲಿ ಇಂತಹ ಮಹತ್ವದ ಪ್ರಬಂಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮುಖ್ಯವಾಗಿ ಹಿಂದೆ ನಾವು ವಿದ್ಯೆ ಕಲಿಯಲು ಅನುಭವಿಸಿದ ಕಷ್ಟಗಳಿಂದ ಈ ತರಹದ ಕಾರ್ಯಕ್ರಮ ರೂಪಿಸಲು ಪ್ರೇರೇಪಿಸಿದೆ. ನಮ್ಮ ಕಾಲದಲ್ಲಿ ಈ ರೀತಿ ಹೇಳಿಕೊಡುವವರು ಇರಲಿಲ್ಲ, ಆದರೆ ಇಂತಹ ಕಾರ್ಯಕ್ರಮಗಳಿಂದ ನಿಮ್ಮ ಪ್ರತಿಭೆಗಳನ್ನು ಹೊರಗೆ ತರಲು ಸಾಧ್ಯವಾಗುತ್ತಿದೆ. ಹಾಗಾಗಿ ಮುಂದೆಯೂ ಇಂತಹ ಹಲವಾರು ಕಾರ್ಯಕ್ರಮ ಕೈಗೊಳ್ಳುವ ಯೋಚನೆ ಇದೆ ಎಂದರು.


ವಿದ್ಯೆಯಲ್ಲಿ ಬದಲಾವಣೆಯಾಗಬೇಕೆಂದರೆ ಅದು ಶಿಕ್ಷಕರಿಂದ ಮಾತ್ರ ಸಾಧ್ಯ. ಮಕ್ಕಳೂ ಪಾಲಕರನ್ನು ಮೆಚ್ಚಿಸುವುದಕ್ಕಾಗಿ ಕಷ್ಟಪಟ್ಟು ಓದುವುದನ್ನು ಬಿಟ್ಟು ಏನಾದರೂ ಸಾಧನೆ ಮಾಡಬೇಕೆಂಬ ಗುರಿ ಹೊಂದುವ ಮೂಲಕ ಇಷ್ಟಪಟ್ಟು ಓದುವಂತಹ ಪ್ರವೃತ್ತಿ ಬೆಳೆಸಿಕೊಳಬೇಕು. ನಾನು ಏನಾದರೂ ಆಗುತ್ತೀನಿ ಎಂಬ ಅಚಲವಾದ ನಂಬಿಕೆ ಇಟ್ಟು ಶ್ರದ್ಧೆಯಿಂದ ಪ್ರಯತ್ನಪಟ್ಟರೆ ಯಶಸ್ಸು ನಿಮ್ಮದೆ ಆಗಲಿದೆ. ಅಧುನಿಕ ಕಾಲದಲ್ಲಿ ರಾಜ್ಯದಲ್ಲಿ ಈ ರೀತಿಯ ಕಾರ್ಯಕ್ರಮ ಮಾಡಿರುವುದು ನಮ್ಮ ತಾಲೂಕಿನಲ್ಲಿ ಮಾತ್ರ, ಇಂತಹ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳು ಮುಂದೆ ಉನ್ನತ ಸ್ಥಾನಕ್ಕೇರಿದರೆ ಕಾರ್ಯಕ್ರಮ ರೂಪಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.


ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಶಾಲೆಗಳ ನೂರಾರು ವಿದ್ಯಾರ್ಥಿಗಳಿಗೆ ಶಾಸಕರು ಪ್ರಶಸ್ತಿ ವಿತರಿಸಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯೆ ತಾರಾ ಮಂಜುಗೌಡ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಬಿಇಒ ದೇವರಾಜು, ತಾಪಂ ಇಒ ಅಶೋಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net