ಸವಲತ್ತು ಪಡೆದು ಫಲಾನುಭವಿಗಳು ಆರ್ಥಿಕವಾಗಿ ಸಬಲರಾಗಲಿ

ಕೆ.ಆರ್.ನಗರದಲ್ಲಿರುವ ಶಾಸಕರ ಕಚೇರಿ ಆವರಣದಲ್ಲಿ ಶಾಸಕ ಡಿ. ರವಿಶಂಕರ್ ಫಲಾನುಭವಿಗಳಿಗೆ ಬೋರ್‌ವೆಲ್ ಪರಿಕರಗಳನ್ನು ವಿತರಿಸಿದರು.
ಕೆ.ಆರ್.ನಗರದಲ್ಲಿರುವ ಶಾಸಕರ ಕಚೇರಿ ಆವರಣದಲ್ಲಿ ಶಾಸಕ ಡಿ. ರವಿಶಂಕರ್ ಫಲಾನುಭವಿಗಳಿಗೆ ಬೋರ್‌ವೆಲ್ ಪರಿಕರಗಳನ್ನು ವಿತರಿಸಿದರು.
Published on

ಕೆ.ಆರ್.ನಗರ: ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.

ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಮತ್ತು ಭೋವಿ ಅಭಿವೃದ್ಧಿ ನಿಗಮದಿಂದ ನೀಡಲಾದ ಬೋರ್ವೆಲ್ ಪರಿಕರಗಳನ್ನು ಪಟ್ಟಣದ ಹಾಸನ-ಮೈಸೂರು ರಸ್ತೆಯಲ್ಲಿರುವ ಶಾಸಕರ ಕಾರ್ಯಾಲಯ ಆವರಣದಲ್ಲಿ ಶುಕ್ರವಾರ ವಿತರಿಸಿ ಮಾತನಾಡಿದರು. 7 ವಿವಿಧ ಫಲಾನುಭವಿಗಳು ತಮ್ಮ ಜಮೀನಿನಲ್ಲಿ ಕೊರೆಸಿರುವ ಕೊಳವೆ ಬಾವಿಗಳಲ್ಲಿ ಪರಿಕರಗಳನ್ನು ಅಳವಡಿಸಿಕೊಳ್ಳಲು ನಿಗಮದ ಅಧಿಕಾರಿಗಳು ಸಹಾಯ ಮತ್ತು ಸಹಕಾರ ನೀಡಲಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಮತ್ತಷ್ಟು ಅರ್ಹರಿಗೆ ಬೋರ್‌ವೆಲ್ ಪರಿಕರ ಮತ್ತು ಇತರ ಅನುಕೂಲಗಳನ್ನು ಸರ್ಕಾರದ ವತಿಯಿಂದ ನೀಡಲಿಲಾಗುವುದು. ಆಸಕ್ತರು ಸೂಕ್ತ ದಾಖಲೆಗಳೊಂದಿಗೆ ಸಂಬಂಧಿತ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಸುಮಿತಾ ಅವರೊಂದಿಗೆ ಶಾಸಕರು ಕಚೇರಿ ಆವರಣವನ್ನು ಪರಿಶೀಲಿಸಿ ರಸ್ತೆಗೆ ಹೊಂದಿಕೊಂಡಂತಿರುವ ಭಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲು ಅಂದಾಜು ಪಟ್ಟಿ ತಯಾರಿಸಿ ವರದಿ ನೀಡಬೇಕೆಂದು ಸೂಚಿಸಿದರು.

ಫಲಾನುಭವಿಗಳಾದ ಎಚ್.ಎಸ್.ಸ್ವಾಮಿ, ಕಾಳಯ್ಯ, ಅಕ್ಕಯ್ಯಮ್ಮ, ಸಣ್ಣಸ್ವಾಮಿ, ಗೌರಮ್ಮ, ರಾಮಮ್ಮ ಮತ್ತು ಮೂರ್ತಿ ಅವರಿಗೆ ಬೋರ್‌ವೆಲ್ ಪರಿಕರಗಳನ್ನು ಶಾಸಕರು ವಿತರಣೆ ಮಾಡಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ಕೆ. ಸುನಿಲ್ ಕುಮಾರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಚ್.ಎಲ್.ಶಂಕರಮೂರ್ತಿ, ನಗರ ಯೋಜನ ಪ್ರಾಧಿಕಾರದ ನಿರ್ದೇಶಕ ಪ್ರಸನ್ನಕುಮಾರ್, ಸಾಲಿಗ್ರಾಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ಸಾಲಿಗ್ರಾಮ ಎಸ್‌ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ದಲಿತ ಮುಖಂಡ ಚಿಬುಕಹಳ್ಳಿ ಬಲರಾಮು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್. ನಾಗೇಂದ್ರ, ಟಿಎಪಿಸಿಎ ಎಸ್ ಮಾಜಿ ನಿರ್ದೇಶಕ ಜಿ.ಆರ್.ಮಹದೇವ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net