

ಆಲೂರು: ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆಯೋಜಿಸಿರುವ ಆರೋಗ್ಯ ಜಾಗೃತಿ ಅಭಿಯಾನದ ಲಾಭವನ್ನು ತಾಲೂಕಿನ ಜನರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ಶಿವಶಂಕರ್ ಮನವಿ ಮಾಡಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಜಿಲ್ಲಾ ಹಾಗೂ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜನಪದ ಕಲಾ ತಂಡಗಳ ಮೂಲಕ ಆಯೋಜಿಸಿದ್ದ ಆರೋಗ್ಯ ಅರಿವು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಹಾರ ಪದ್ಧತಿ, ಮಾನಸಿಕ ಒತ್ತಡ, ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗೆ ಜನರು ತುತ್ತಾಗುತ್ತಿದ್ದಾರೆ. ಬಹಳಷ್ಟು ಜನರು ತಪಾಸಣೆಗೆ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ರೋಗ ಉಲ್ಭಣಿಸಿದ ನಂತರ ಪಡಿಪಾಟಲು ಪಡುವ ಪರಿಸ್ಥಿತಿ ಉಂಟಾಗುತ್ತಿದೆ. ಇದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ತಾಲೂಕಿನ ಆರೋಗ್ಯ ಅಭಿಯಾನದಲ್ಲಿ ನುರಿತ ಕಲಾವಿದರು ಬೀದಿ ನಾಟಕ, ಜಾನಪದ ಗೀತೆಗಳ ಮೂಲಕ ಗ್ರಾಮೀಣರಿಗೆ ಸುಲಲಿತವಾಗಿ ಅರ್ಥವಾಗುವ ಶೈಲಿಯಲ್ಲಿ ಆರೋಗ್ಯ ಜಾಗೃತಿ ಹಾಗೂ ಆರೋಗ್ಯ ರಕ್ಷಣೆಗಾಗಿ ಇರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳ ವಿವರ ನೀಡುವರು. ಅವುಗಳನ್ನು ತಿಳಿದು ಉತ್ತಮ ಆರೋಗ್ಯ ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯಾಧಿಕಾರಿ ನಿಸ್ಸಾರ್ ಫಾತಿಮಾ ಮಾತನಾಡಿ, ಗರ್ಭಿಣಿ ಹಾಗೂ ಬಾಣಂತಿಯರು ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಸಮಯಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ನಿಯಮಿತವಾದ ವ್ಯಾಯಾಮ, ಧ್ಯಾನ ಮಾಡಬೇಕು. ಇದರಿಂದ ದೇಹ ಮತ್ತು ಮನಸ್ಸಿನ ಸ್ಥಿತಿ ಸಮರ್ಪಕವಾಗಿರುತ್ತದೆ. ಈ ಕುರಿತು ತಾಲೂಕಿನಾದ್ಯಂತ ಕಲಾ ತಂಡಗಳಿಂದ ಪ್ರಚಾರ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ತಾಲೂಕು ಅರೋಗ್ಯ ಶಿಕ್ಷಣಾಧಿಕಾರಿ ಸತೀಶ್, ಹಿರಿಯ ಅರೋಗ್ಯ ನಿರೀಕ್ಷಣಾಧಿಕಾರಿ ಮೋಹನ್, ಮೇಲ್ವಿಚಾರಕರಾದ ಭಾಗ್ಯಮ್ಮ, ಶ್ವೇತಾ, ಮುರಳಿ, ಮಂಜು ಸಿಬ್ಬಂದಿ ಇದ್ದರು.