

ಕಲಾದಗಿ: ಯಾವೊಬ್ಬ ಮಗುವೂ ಹಸಿವಿನಿಂದ ಬಳಲಬಾರದು ಎಂಬ ಸದುದ್ದೇಶ ಹೊಂದಿರುವ ಅಕ್ಷರ ದಾಸೋಹ ಯೋಜನೆ ಸದ್ಬಳಕೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಲಾ ಶಿಕ್ಷಕರದಷ್ಟೇ ಅಲ್ಲ. ಅದು ಸಮುದಾಯದ ಜವಾಬ್ದಾರಿಯೂ ಆಗಿದೆ ಎಂದು ಬಾಗಲಕೋಟೆ ತಾಲೂಕು ಅಕ್ಷರದಾಸೋಹ ಯೋಜನೆ ಸಹಾಯಕ ನಿರ್ದೇಶಕ ನಾಗರಾಜ ದೇಶಪಾಂಡೆ ಹೇಳಿದರು.
ಗ್ರಾಮದಲ್ಲಿ ಕಳೆದ ವರ್ಷ ಆರಂಭಗೊಂಡಿರುವ ಮೌಲಾನಾ ಆಜಾದ್ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಅಕ್ಷರ ದಾಸೋಹ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇನ್ನುಳಿದ ಶಾಲೆಗಳಿಗೆ ಮಾದರಿಯಾಗುವಂತೆ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಶಾಲೆಗೆ ಅಕ್ಷರ ದಾಸೋಹ ಯೋಜನೆಯಿಂದ ಬೇಕಾದ ಅಗತ್ಯತೆಗಳನ್ನು ಶಾಸಕರ ನೆರವಿನೊಂದಿಗೆ ಪೂರೈಸಲಾಗುವುದು ಎಂದು ಭರವಸೆ ನೀಡಿದರು.
ಅಂಜುಮನ್ ಕಮಿಟಿ ಅಧ್ಯಕ್ಷ ರಫೀಕ ಅಹ್ಮದ ಬೇಪಾರಿ ಮಾತನಾಡಿ, ಶೈಕ್ಷಣಿಕ ಅಭಿವದ್ಧಿಗೆ ಅಂಜುಮನ್ ಕಮಿಟಿ ಸದಾ ಬದ್ಧವಾಗಿದೆ ಎಂದರು.
ಗ್ರಾಪಂ ಸದಸ್ಯ ಎಂ.ಎ.ತೇಲಿ, ಸಿಆರ್‌ಸಿ ಮಂಜುನಾಥ ಹೆಡಗಿ, ಮೌಲಾನಾ ಆಜಾದ್ ಶಾಲೆ ಮುಖ್ಯಗುರು ಇಬ್ರಾಹಿಂ ಮುಲ್ಲಾ, ಸರ್ಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ಮುಖ್ಯ ಗುರುಮಾತೆ ಆರ್.ಎ.ಪಟೇಲ, ಎಸ್‌ಡಿಎಂಸಿ ಅಧ್ಯಕ್ಷ ಎಸ್.ಟಿ.ಜಮಾದಾರ ಹಾಗೂ ಅಂಜುಮನ್ ಕಮಿಟಿ ಸದಸ್ಯರು ಇದ್ದರು.