

ಮೈಸೂರು: ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಸ್ಪರ್ಧೆಗಳನ್ನು ಎದುರಿಸಿ ತಮ್ಮಲ್ಲಿರುವ ಕಲೆಯನ್ನು ಪ್ರದರ್ಶಿಸಬೇಕು. ಈ ಮೂಲಕ ದೇಶದ ಕಿರೀಟಕ್ಕೆ ಮುತ್ತುಗಳಾಗಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ಹೆಬ್ಬಾಳು ಶ್ರೀಲಕ್ಷ್ಮೀಕಾಂತ ದೇವಸ್ಥಾನದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 27ನೇ ಮೈಸೂರು ಜಿಲ್ಲಾ ಮಟ್ಟದ ಚುಂಚಾದ್ರಿ ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಗೆಲ್ಲದಿದ್ದರೂ ಚಿಂತೆಯಿಲ್ಲ. ಆದರೆ ಸ್ಪರ್ಧೆ ನಿಮ್ಮನ್ನು ಗಟ್ಟಿಗೊಳಿಸುತ್ತದೆ. ನಿಮ್ಮ ಶಿಕ್ಷಕರಿಗೆ, ತಂದೆ ತಾಯಿಗಳಿಗೆ ಹೆಸರು ಬರುವಂತೆ ನಿಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಿ ವಿಜೇತರಾಗಬೇಕು ಎಂದು ತಿಳಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಟಿ.ಜವರೇಗೌಡ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ತನ್ನದೆ ಆದ ಪ್ರತಿಭೆ ಇರುತ್ತದೆ. ಆ ಪ್ರತಿಭೆಯನ್ನು ಹೊರತೆಗೆಯಲು ಇದೊಂದು ಉತ್ತಮವಾದ ವೇದಿಕೆಯಾಗಿದೆ ಎಂದರು.
ವಿಶ್ರಾಂತ ಕುಲಪತಿ ಪ್ರೊ. ಪದ್ಮಾಶೇಖರ್ ಮಾತನಾಡಿ, ಶಿಕ್ಷಣ ಮನುಷ್ಯನನ್ನು ತುಂಬ ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ. ಗ್ರಾಮೀಣ ಮಕ್ಕಳಲ್ಲಿರುವ ಪ್ರತಿಭೆ ನಗರದ ಮಕ್ಕಳಿಗಿರುವ ಪ್ರತಿಭೆಗಿಂತ ಕಡಿಮೆಯಿಲ್ಲ. ನಾವೆಲ್ಲ ಗ್ರಾಮೀಣ ಭಾಗದಿಂದ ಬಂದು ಸಾಧನೆ ಮಾಡಿದ್ದೇವೆ. ಓದಿನ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳ ಜತೆ ಜತೆಯಾಗಿ ಮೈಗೂಡಿಸಿಕೊಂಡು ಚಲನಶೀಲವಾಗಿರಬೇಕು ಎಂದರು.
ಬಿಜಿಎಸ್ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ನರಸೇಗೌಡ, ಕಲಾವಿದರಾದ ಎಂ. ರವಿಕುಮಾರ್, ಪ್ರಾಧ್ಯಾಪಕಿ ಯಶೋದಾ ಇತರರು ಇದ್ದರು.