

ಕಲಬುರಗಿ: ಅಭಿವೃದ್ಧಿ, ಉದ್ಯೋಗ ಲಭ್ಯತೆ, ಸಂಘ ಸಂಸ್ಥೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಇತ್ಯಾದಿ ಕಾರಣಗಳಿಗೆ ನಾಡಿನ ಒಳಗಡೆ ಒಡಕಿನ ಧ್ವನಿ ಆಗಾಗ ಕೇಳಿ ಬರುವುದುಂಟು. ಏಕೀಕರಣ ಪ್ರತ್ಯೇಕೀಕರಣಕ್ಕೆ ಎಡೆಯಾಗಬಾರದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬುಧವಾರ ಹೇಳಿದರು.
ಅವರು ಕಲಬುರಗಿಯಲ್ಲಿ 85ನೇ ಅಖಲಿ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ್ದು, ಕೇವಲ ಭೌಗೋಳಿಕ ಮತ್ತು ಭಾಷೆಯ ಕಾರಣಕ್ಕಷ್ಟೇ ನಾವು ಒಂದಾಗಿಲ್ಲ. ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿಯೂ ನಾವೆಲ್ಲ ಒಂದಾಗಿದ್ದೇವೆ. ಈ ಏಕತೆಗೆ ಯಾವುದೇ ಧಕ್ಕೆಯಾಗದಂತೆ ನಮ್ಮೊಳಗಿರುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕದ ಯಾವುದೇ ಪ್ರದೇಶ ಹಿಂದುಳಿಯಬಾರದು. ಎಲ್ಲ ಪ್ರದೇಶಗಳನ್ನು ಸಮಾನವಾಗಿ ಪರಿಗಣಿಸಿ, ಅಗತ್ಯವನ್ನು ಅನುಸರಿಸಿ ಅನುದಾನ ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಕವಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಅವರು ಕಾವ್ಯ, ನಾಟಕ, ಮಕ್ಕಳ ಸಾಹಿತ್ಯ, ಚಿತ್ರ ಸಾಹಿತ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಕನ್ನಡದ ವಿಶಿಷ್ಟ ಪ್ರಕಾರವಾದ ಭಾವಗೀತೆಗಳ ಮೂಲಕ ಜನ ಮಾನಸದಲ್ಲಿ ನೆಲೆಯೂರಿದವರು. ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿರುವುದು ಸಹ ಅತ್ಯಂತ ಔಚಿತ್ಯಪೂರ್ಣವಾಗಿದೆ. ಸಾಹಿತ್ಯ ಸಮ್ಮೇಳನ ಸಾಹಿತ್ಯದೊಂದಿಗೆ ನೆಲ, ಜಲ, ಭಾಷೆಯ ವಿವಿಧ ಆಯಾಮಗಳ ಕುರಿತು, ಜ್ವಲಂತ ವಿಷಯಗಳ ಕುರಿತು ಆರೋಗ್ಯಕರ ಚರ್ಚೆಯ ವೇದಿಕೆಯಾಗಲಿದೆ. ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಈ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ ಈ ಭಾಗದ ಅಭಿವೃದ್ಧಿಯೂ ಪ್ರಮುಖ ವಿಷಯವೇ ಆಗುತ್ತದೆ ಎಂದರು.