

ಹೊಳೆನರಸೀಪುರ: ಭಾರತದಲ್ಲಿ ಕನ್ನಡ ಅತ್ಯಂತ ಶ್ರೀಮಂತ ಭಾಷೆ. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ನಮ್ಮ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ನಮ್ಮ ನಾಡಿನ ಸಾಹಿತಿಗಳು, ಬರಹಗಾರರು, ಕವಿಗಳೆಲ್ಲರನ್ನು ನೆನಪಿಸಿಕೊಳ್ಳುತ್ತಾ ನಮ್ಮ ಕನ್ನಡ ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಗೌರವ ವೃದ್ಧಿಸಿಕೊಳ್ಳೋಣ ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ನುಡಿದರು.
ಇಲ್ಲಿನ ಬಯಲು ರಂಗಮಂದಿರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲ ನಡೆಸಿ ಧ್ವ್ವಜವಂದನೆ ಸಲ್ಲಿಸಿದರು. ಈ ಬಾರಿಯ ಪಥ ಸಂಚಲನದಲ್ಲಿ 2 ಜೋಡಿ ಎತ್ತುಗಳು ಭಾಗವಹಿಸಿ ಗಮನ ಸೆಳೆದವು.
ಇದೇ ಸಂದರ್ಭದಲ್ಲಿ ನಶೆಮುಕ್ತ ಭಾರತ ಅಭಿಯಾನದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮಂಜುಳಾ, ಗುರುಸ್ವಾಮಿ, ರಾಜಮ್ಮ, ಅವರನ್ನು ಸನ್ಮಾನಿಸಲಾಯಿತು. ಹಳೇಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಜಯಶೀಲಾ ಪ್ರಧಾನ ಭಾಷಣ ಮಾಡಿದರು. ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ, ಉಪಾಧ್ಯಕ್ಷೆ ಸಾವಿತ್ರಮ್ಮ, ಮಾಜಿ ಅಧ್ಯಕ್ಷೆ ಸುಧಾನಳಿನಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ತಾಪಂ ಇಒ ಮುನಿರಾಜು, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ಕಸಾಪ ತಾಲೂಕು ಅಧ್ಯಕ್ಷ ಆರ್.ಬಿ.ಪುಟ್ಟೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ, ಅಂಗನವಾಡಿ ಶಿಕ್ಷಕಿ ವಿಜಯಕುಮಾರಿ, ಸುಜತ್ ಅಲಿ ಇತರರು ಭಾಗವಹಿಸಿದ್ದರು.