

ಅಂಕೋಲಾ: ಅರವತ್ತರ ದಶಕದಲ್ಲಿ ಅಂಕೋಲಾದಲ್ಲಿ ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದ ಪ್ರೇಮಾ ಪಿಕಳೆ ಆದರ್ಶ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿ ಎಂದು ಕೆಎಲ್‌ಇ ಸಂಸ್ಥೆ ಬೆಳಗಾವಿಯ ನಿರ್ದೇಶಕ ಡಾ.ವಿ.ಐ. ಪಾಟೀಲ ಹೇಳಿದರು.
ಪ್ರೇಮಾತಾಯಿ ಪಿಕಳೆ ಜನ್ಮ ಶತಮಾನೋತ್ಸವ ಅಂಗವಾಗಿ ಸ್ಥಳೀಯ ಕೆಎಲ್‌ಇ ಸಮೂಹ ಸಂಸ್ಥೆಗಳಲ್ಲಿ ಬುಧವಾರ ಪಿಕಳೆ ಶಿಷ್ಯವೃಂದ ಅರ್ಪಿಸಿದ ಅಂಕವಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಂಸ್ಥೆ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ಪ್ರೇಮಾ ಪಿಕಳೆ ಅವರು ಶಿಕ್ಷಣದ ಅಗತ್ಯವನ್ನು ಮನಗಂಡು ಅವರು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಗಳನ್ನು ಪ್ರತಿಷ್ಠಿತ ಕೆಎಲ್‌ಇಯೊಂದಿಗೆ ವಿಲೀನಗೊಳಿಸಿ ಉನ್ನತ ಶಿಕ್ಷಣಕ್ಕೆ ಅವಕಾಶ ಮಾಡಿದ ಧೀಮಂತ ಮಹಿಳೆ ಎಂದರು.
ಅಂಕವಲ್ಲಿಯ ಸಂಪಾದಕ ಮಂಜುನಾಥ ಬರ್ಗಿ, ನಿವೃತ್ತ ಶಿಕ್ಷಕ ವಾಸುದೇವ ನಾಯಕ, ಪಿಕಳೆ ಶಿಷ್ಯ ವೃಂದದ ಅಧ್ಯಕ್ಷ ನಾರಾಯಣ ನಾಯಕ ಸೂರ್ವೆ ಮಾತನಾಡಿದರು.
ಪ್ರಾಚಾರ್ಯ ಡಾ. ವಿನಾಯಕ ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಡಿ.ಎಲ್. ಭಟ್ಕಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಆರ್. ನಟರಾಜ್, ಸದಸ್ಯೆ ಡಾ. ಮೀನಲ್ ನಾರ್ವೇಕರ ಉಪಸ್ಥಿತರಿದ್ದರು. ನರ್ಸಿಂಗ್ ಪ್ರಾಚಾರ್ಯ ಡಾ.ಗಂಗಾಧರ ಇಸರಣ್ಣವರ, ಉಪನ್ಯಾಸಕ ಮುಂಜುನಾಥ ಇಟಗಿ, ಡಾ.ಪುಷ್ಪಾ ನಾಯ್ಕ ನಿರ್ವಹಿಸಿದರು.