

ಮುಂಡರಗಿ: ಈ ದೇಶ ಧಾರ್ಮಿಕತೆ, ಸಂಸ್ಕೃತಿಯ ದೇಶವಾಗಿದೆ. ಜಾಗತಿಕ ಮಟ್ಟದಲ್ಲಿ ಅಶಾಂತಿ ಇದೆ. ಭಯೋತ್ಪಾದಕರು ಅಟ್ಟಹಾಸ ಮೆರೆಯುತ್ತಿದ್ದು ಈ ಕೃತ್ಯ ನಿಲ್ಲಬೇಕು. ಬಹುತ್ವದ ಭಾರತ ದೇಶದಲ್ಲಿ ಎಲ್ಲ ಧರ್ಮಗಳು ಕೂಡಿಕೊಂಡು ಬದುಕಬೇಕು ಎಂದು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಶರಣ ಚರಿತಾಮೃತ ಪ್ರವಚನ ಮಂಗಲೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರ ಮೂರ್ತಿ ಹಾಗೂ ವಚನ ಗ್ರಂಥಗಳ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ದೇಶದಲ್ಲಿ ಶಾಂತಿ ನೆಲೆಸಲಿ, ವ್ಯಸನ ಮುಕ್ತವಾಗಲಿ. ಅನೀತಿ, ಅನಾಚಾರ, ಅತ್ಯಚಾರ ನಿಲ್ಲಲಿ. ಮಹಿಳೆಯರು ಗೌರವಯುತವಾಗಿ ಬಾಳುವಂತಾಗಲಿ. ದೇಶದಲ್ಲಿ ರೈತರು ರೈತರು ಸಂತೃಪ್ತಿಯ ಜೀವನ ನಡೆಸಲಿ. ಮಹಾತ್ಮರು ನಮಗಾಗಿ ಬದುಕಿ ಹೋಗಿದ್ದಾರೆ. ಮಹಾತ್ಮರಿಗಾಗಿ ಈ ಮೆರವಣಿಗೆ ಮಾಡುತ್ತೇವೆ ಹೊರತು ಕಾಲ್ಪನಿಕ ವಸ್ತುಗಳ ಮೆರವಣಿಗೆ ಮಾಡುವುದಿಲ್ಲ ಎಂದರು.
ಶ್ರೀಮಠದಿಂದ ಹೊರಟ ಪಲ್ಲಕ್ಕಿ ಉತ್ಸವ ಮುಖ್ಯಬಜಾರ್, ಹೇಮರಡ್ಡಿ ಮಲ್ಲಮ್ಮ ವೃತ್ತ, ನುಲಿಯ ಚಂದಯ್ಯ ವೃತ್ತ, ಬಂಡಾಯ ಭೀಮರಾಯ ವೃತ್ತ, ಕಿತ್ತೂರು ಚನ್ನಮ್ಮ ವೃತ್ತ, ಸರ್ ಸಿದ್ದಪ್ಪ ಕಂಬಳಿ ವೃತ್ತ, ಜಾಗೃತ್ ಸರ್ಕಲ್ ಮಾರ್ಗವಾಗಿ ಪುನಃ ದೇವಸ್ಥಾನವನ್ನು ತಲುಪಿತು. ಉತ್ಸವದಲ್ಲಿ ದಾವಣಗೆರೆಯ ಬಸವ ಕಲಾ ಲೋಕ ತಂಡದ ಕಲಾವಿದರ ವೀರಗಾಸೆ ನೃತ್ಯ, ಕಂಸಾಳೆ, ಜಾಂಜ್‌ಮೇಳ ಮೊದಲಾದ ವಾದ್ಯಮೇಳಗಳು ಜನರ ಗಮನ ಸೆಳೆಯಿತು. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಮಾಜಿ ಸಚಿವ ಎಸ್.ಎಸ್. ಪಾಟೀಲ, ಶ್ರೀ ಮಹಾಂತ ಸ್ವಾಮೀಜಿ, ಬಸವೇಶ್ವರಿ ಮಾತಾಜಿ, ಬಸವಾನಂದ ಸ್ವಾಮೀಜಿ, ಗೋಣಿರುದ್ರಮುನಿ ದೇವರು, ಬಸಯ್ಯ ಗಿಂಡಿಮಠ, ಎಚ್. ವಿರೂಪಾಕ್ಷಗೌಡ್ರ, ವೀರಪ್ಪ ಮಡಿವಾಳರ, ಶಿವಕುಮಾರ ಬೆಟಗೇರಿ, ವಿಶ್ವನಾಥ ಉಳ್ಳಾಗಡ್ಡಿ, ಎಚ್.ಎ.ಗೌಡರ, ಕೊಟ್ರೇಶ ಅಂಗಡಿ, ಎಸ್.ಎಸ್. ಗಡ್ಡದ, ಕರಬಸಪ್ಪ ಹಂಚಿನಾಳ, ಪಾಲಾಕ್ಷಿ ಗಣದಿನ್ನಿ, ಪವನ ಚೋಪ್ರಾ, ಈಶ್ವರಪ್ಪ ಬೆಟಗೇರಿ, ಶಿವಯೋಗಿ ಕೊಪ್ಪಳ, ಅಶೋಕ ಹುಬ್ಬಳ್ಳಿ, ದೇವೇಂದ್ರಪ್ಪ ರಾಮೇನಹಳ್ಳಿ, ಸುಕನ್ಯಾ ಕಬ್ಬೂರಮಠ, ಮಂಗಳಾ ಶೀರಿ, ಶಾಂತಾ ಕುಬಸದ, ಶಿವಗಂಗಾ ನವಲಗುಂದ, ಲತಾ ಹಿರೇಮಠ, ಮಂಗಳಾ ಕರ್ಜಗಿ ಇತರರು ಇದ್ದರು.