

ಹೂವಿನಹಡಗಲಿ: ಕೊಪ್ಪಳ ಜಿಲ್ಲೆ ಯಲಬುರ್ಗ ತಾಲೂಕಿನ ಸಂಗನಾಳ ಗ್ರಾಮದ ದಲಿತ ಯುವಕನ ಹತ್ಯೆ, ಬಿಹಾರದ 14 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಹಾಗೂ ವೈದ್ಯವಿದ್ಯಾರ್ಥಿ ಮೇಲೆ ಅತ್ಯಾಚಾರ ಕೊಲೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಆಂದೋಲನದ ರಾಜ್ಯ ಸಂಚಾಲಕ ಹಲಗಿ ಸುರೇಶ ಮಾತನಾಡಿ, ರಾಜ್ಯದಲ್ಲಿ ದಲಿತರ ಮೇಲೆ ನಿರಂತರವಾದ ದೌರ್ಜನ್ಯ ನಡೆಯುತ್ತಲೆ ಇದೆ. ಅಕ್ಷರಸ್ತರಾದ ಅನೇಕರಿಂದಲೇ ಜಾತಿ ನಿಂದನೆ ಮತ್ತು ಸಮಾಜದಿಂದ ದೂರ ಇಡುವ ಕೆಲಸಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಇದನ್ನು ಓದಿ:ಕೊಲೆಗಾರರ ಪತ್ತೆಗೆ ತಂಡ ರಚನೆ
ತಾಲೂಕು ಸಂಚಾಲಕ ಬಸವರಾಜ ಸಂಶಿ ಮಾತನಾಡಿ, 14 ವರ್ಷದ ದಲಿತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಕ್ರೂರಿಗಳು ಯಾವ ಮನಸ್ಥಿತಿಯನ್ನು ಹೊಂದಿದ್ದಾರೆ.
ವೈದ್ಯವಿದ್ಯಾರ್ಥಿನಿಯ ಕೊಲೆ ಮಾಡಿದ ಕಟುಕರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದರು.