

ಕೆ.ಆರ್.ಸಾಗರ: ಮಂಡ್ಯ ಜಿಲ್ಲೆಯನ್ನು ಬಾಲ್ಯವಿವಾಹಮುಕ್ತ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ ಎಂದು ಪ್ರಭಾರ ಟಿಎಚ್‌ಒ ಡಾ.ಗಣೇಶ್ ಪ್ರಸಾದ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೆಳಗೊಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಆಯೋಜಿಸಿದ್ದ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ಏರ್ಪಡಿಸಿದ್ದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಎಂದರೆ ಬಂಗಾರದಂತಹ ಜೀವನ. ಈ ಸಂದರ್ಭದಲ್ಲಿ ಓದಿನ ಕಡೆ ಗಮನಹರಿಸಬೇಕೇ ಹೊರತು ಪ್ರೀತಿ, ಪ್ರೇಮದಂತಹ ಅನ್ಯ ಚಟುವಟಿಕೆಗೆ ಇಳಿಯಬಾರದು. ಮೊದಲು ಸಂಪೂರ್ಣ ಶಿಕ್ಷಣ ಪಡೆಯಬೇಕು. ನಂತರ ಸರ್ಕಾರ ನಿರ್ದೇಶಿಸಿದ ವಯಸ್ಸಿಗನುಗುಣವಾಗಿ ಮದುವೆಯಾಗಿ ಸುಂದರ ಜೀವನ ನಡೆಸಬೇಕು. ಮನೆಯಲ್ಲಿ ಪಾಲಕರ ಒತ್ತಾಯಕ್ಕಾಗಿ ಬಾಲ್ಯವಿವಾಹ ಆಗಲೇಬಾರದು. ಚಿಕ್ಕ ವಯಸ್ಸಿನಲ್ಲಿ ಮದುವೆ ಆಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಲ್ಲದೆ ಶಿಕ್ಷೆಗೆ ಗುರಿಯಾಗುವಿರಿ. ಆದ್ದರಿಂದ ಬಾಲ್ಯ ವಿವಾಹ ಆಗಬೇಡಿ, ಆಗುವವರಿಗೂ ತಿಳಿಹೇಳಿ. ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಎಂದು ಸಲಹೆ ನೀಡಿದರು.
ನಂತರ ಸಿಡಿಪಿಒ ಎಸ್.ಸಕಲೇಶ್ವರ್ ಮಾತನಾಡಿ, ಬಾಲ್ಯ ವಿವಾಹ ಹಾಗೂ ಪೋಕ್ಸೋ ಪ್ರಕರಣಗಳು ಸಮಾಜದ ಬಹುದೊಡ್ಡ ಪಿಡುಗಾಗಿದ್ದು, ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ.ಬಾಲ್ಯ ವಿವಾಹ ಆಗುವುದರಿಂದ ಶಿಕ್ಷಣದಿಂದ ವಂಚಿತರಾಗುವ ಜತೆಗೆ ದೈಹಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕಾನೂನಿನ ಪ್ರಕಾರ 2 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಪುಷ್ಪಾವತಿ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಗ್ರಾಪಂ ಸದಸ್ಯರಾದ ಆರ್ಮುಗಂ, ಮಂಜುಳಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ವಿಜ್ಞಾನ ಶಿಕ್ಷಕರಾದ ರಾಜು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಬಿ.ಹೇಮಣ್ಣ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಟಿ.ಟಿ.ಜ್ಯೋತಿ, ಅಂಗನವಾಡಿ ಕಾರ್ಯಕರ್ತೆ ವಿದ್ಯಾಶ್ರೀ,ಪವಿತ್ರಾ, ಸುನೀತಾ, ಪೃಥ್ವಿ ಹಾಗೂ ಶಾಲಾ ಶಿಕ್ಷಕರು ಇದ್ದರು.