

ಗೋಕರ್ಣ: ಭಾರತೀಯ ಸನಾತನ ಶಾಸ್ತ್ರ ಪರಂಪರೆ ಮಂಗಲ ದ್ರವ್ಯಗಳ ದರ್ಶನ ಮತ್ತು ಸ್ಪರ್ಶನದಿಂದ ನಿತ್ಯದ ಪ್ರಾತಃ ಕಾಲದ ಆರಂಭವಾಗಬೇಕು ಎನ್ನುತ್ತದೆ. ಆದರೆ, ವರ್ತಮಾನದ ಬದುಕು ಎದ್ದ ತಕ್ಷಣ ವಿಷಮಯ ವಸ್ತು ಬಳಕೆಯೊಂದಿಗೆ ದಿನಗಳು ಪ್ರಾರಂಭವಾಗುವ ಅಮಂಗಲತ್ವಕ್ಕೆ ಶರಣಾಗಿದೆ. ಸಾಮಾಜಿಕ ಜೀವನ ವಿಷತ್ವವನ್ನು ತೊಡೆದು ಅಮೃತತ್ವದತ್ತ ಸಾಗುವಂತಾಗಲಿ ಎಂದು ಇಲ್ಲಿನ ಅಶೋಕೆಯಲ್ಲಿ 32ನೆ ಸ್ವಭಾಷಾ ಚಾತುರ್ಮಾಸ್ಯದಲ್ಲಿರುವ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿನುಡಿದರು.
ಶ್ರೀಮಠದ ಗೋಫಲ ಟ್ರಸ್ಟ್ ಸಿದ್ಧ ಪಡಿಸಿದ ಸಾವಯವ ದಂತಮಂಜನ ’ದಂತಸುರಭಿ’ಯನ್ನು ಬುಧವಾರ ಲೋಕಾರ್ಪಣೆ ಮಾಡಿ ಶ್ರೀಗಳು ಆಶೀರ್ವದಿಸಿದರು.
ದಂತಮಂಜನ ಹೆಸರಿನಲ್ಲಿ ರಾಸಾಯನಿಕ ವಿಷ ಮತ್ತು ಎಲುಬಿನ ಪುಡಿ ಮಿಶ್ರಿತ ವಸ್ತುವನ್ನು ಬಾಯಿಯ ಮೂಲಕ ದೇಹದ ನರನಾಡಿಗಳಿಗೆ ಸೇರಿಸುವ ದಿನಚರಿಯ ಅನುಕರಣೆ ಎಲ್ಲೆಡೆ ಬೆಳೆದು ನಿಂತಿದೆ. ವಿಷಮುಕ್ತ ಹಾದಿಯಲ್ಲಿ ಸಾಗಿ ಸರ್ವರೂ ಜೀವನವನ್ನು ಶುಭಕರವಾಗಿಸಿಕೊಳ್ಳುವಂತಾಗಲಿ ಎಂದರು.
ಗೋಫಲ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಸುಬ್ರಹ್ಮಣ್ಯ ಮಾತನಾಡಿದರು. ಬೆಂಗಳೂರಿನ ಡಾ.ವಿಶ್ವನಾಥ ಭಟ್ಟ ದಂಪತಿ ಸರ್ವಸೇವೆ ಸಮರ್ಪಿಸಿದರು. ಗೋಫಲ ಟ್ರಸ್ಟ್ ಅಧ್ಯಕ್ಷ ಪದ್ಮನಾಭ ಭಟ್ಟ ಕೊಂಕೋಡಿ, ಡಾ.ವೈ.ವಿ. ಕೃಷ್ಣಮೂರ್ತಿ, ಮುರಳೀಧರ ಪ್ರಭು, ಕೇಶವಪ್ರಸಾದ ಮುಳಿಯ, ಡಾ.ವಿದ್ಯಾ ಸರಸ್ವತಿ, ಜಿ.ಕೆ. ಹೆಗಡೆ, ಡಾ. ರಾಜಗೋಪಾಲ, ಸಂಯೋಜಕ ಎನ್.ಕೆ. ಹೆಗಡೆ ಮತ್ತಿತರರಿದ್ದರು.
ಇದೇ ವೇಳೆ ಚಾತುರ್ಮಾಸ್ಯದಲ್ಲಿ ಸ್ವರ್ಣಪಾದುಕೆ ಸೇವೆ ಮಾಡಿದ ಹಾಲಕ್ಕಿ ಸಮಾಜದ ಶ್ರದ್ಧೆ ಮತ್ತು ನಿಷ್ಠೆಯನ್ನು ಶ್ಲಾಘಿಸಿ ಆಶೀರ್ವಾದವಿತ್ತರು. ಹಾಲಕ್ಕಿ ಸಮಾಜ ಪ್ರಮುಖರಾದ ಹನುಮಂತ ಗೌಡ ಬೆಳಂಬರ, ಬಿ.ಎಸ್. ಗೌಡ, ಎಸ್.ಟಿ.ಗೌಡ, ಮಂಜುನಾಥ ಗೌಡ ಕೆಕ್ಕಾರು, ಶಂಕರ ಗೌಡ ಹೆಗ್ರೆ ಮತ್ತಿತರರಿದ್ದರು.