

ಮೈಸೂರು: ಎಷ್ಟೇ ಭಾಷೆಗಳನ್ನು ಕಲಿತರೂ ನಾವು ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿರುವುದು ನಮ್ಮ ಮಾತೃಭಾಷೆ ಮಾತ್ರವಾಗಿರಬೇಕು ಎಂದು ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು ಹೇಳಿದರು.
ನಗರದ ಬೋಗಾಧಿಯಲ್ಲಿರುವ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಅತ್ಯಂತ ಸುಲಲಿತ ಭಾಷೆ. ಯಾರೇ ಆದರೂ ಇದನ್ನು ಸುಲಭದಲ್ಲಿ ಕಲಿತು ಮಾತನಾಡಬಹುದು. ಆದರೆ ನಮ್ಮ ಈ ತಾಯಿಭಾಷೆಯ ಬಗೆಗೆ ನಮಗೆ ಅಭಿಮಾನ, ಗೌರವವಿರಬೇಕು. ಜಿ.ಪಿ.ರಾಜರತ್ನಂ ಅವರು ಹೇಳಿದಂತೆ ಏನೇ ಆದರೂ ಕನ್ನಡ ಭಾಷೆ ಮಾತನಾಡುವುದನ್ನು ಮಾತ್ರ ಬಿಡಬಾರದು. ಹಾಗೆಯೇ ಪ್ರಪಂಚದ ಕೊನೆಯವರೆಗೂ ಕನ್ನಡ ಉಳಿಯಬೇಕು. ಹೀಗೆ ಮಾಡುವಲ್ಲಿ ಕನ್ನಡಿಗರ ಜವಾಬ್ದಾರಿ ದೊಡ್ಡದು ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಬೇರೆ ಭಾಷೆಗಳನ್ನು ಕಲಿಯಬೇಕಾದ, ಮಾತನಾಡಬೇಕಾದ ಅವಶ್ಯಕತೆಯ ಬಗ್ಗೆ ತಮ್ಮ ವಿಚಾರಗಳನ್ನು ಮಂಡಿಸಿದ ಅವರು, ಎಷ್ಟೇ ಭಾಷೆಗಳನ್ನು ಕಲಿತರೂ ನಾವು ಉಳಿಸಿ, ಬೆಳೆಸಿಕೊಂಡು ಹೋಗಬೇಕಾದ ಭಾಷೆ ನಮ್ಮ ಮಾತೃಭಾಷೆ ಮಾತ್ರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ನೃತ್ಯ ಪ್ರದರ್ಶನ ನಡೆಯಿತು. ಕೆಂಪು ಹಾಗೂ ಹಳದಿ ಬಣ್ಣಗಳ ಸಾಂಪ್ರದಾಯಿಕ ಉಡುಪುಗಳನ್ನು ತೊಟ್ಟಿದ್ದ ವಿದ್ಯಾರ್ಥಿಗಳ ಸಂಭ್ರಮ ಕ್ಯಾಂಪಸ್‌ನಲ್ಲಿ ಕಳೆ ತಂದಿತ್ತು.
ಅಮೃತ ವಿಶ್ವವಿದ್ಯಾಪೀಠಂ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ರವೀಂದ್ರನಾಥ್ ಅಧ್ಯಕ್ಷತೆ ವಹಿಸಿದ್ದರು. ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಆವರಣದ ನಿರ್ದೇಶಕರಾದ ಶ್ರೀಅನಂತಾನಂದ ಚೈತನ್ಯ ಹಾಗೂ ಕಾಲೇಜಿನ ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಇದ್ದರು.