

ಶಿಗ್ಗಾಂವಿ: ಜನರಲ್ಲಿ ಧನಾತ್ಮಕ ಚಿಂತನೆ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯಕ ಚಟುವಟಿಕೆಗಳನ್ನು ಹೆಚ್ಚಿಸುವ ದೃಷ್ಟಿಕೋನದಿಂದ ಕನ್ನಡ ಸಾಹಿತ್ಯಾಸಕ್ತರಿಂದ ಕನ್ನಡ ಭಾಷೆ, ಕನ್ನಡ ಸಾಹಿತ್ಯಕ ಚಟುವಟಿಕೆಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳುವ ಮೂಲಕ ಕನ್ನಡದ ಮೆರುಗು ಹೆಚ್ಚಿಸುವ ಕೆಲಸವಾಗಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕಂದರಾಜ್ ಹೇಳಿದರು.
ತಾಲೂಕಿನ ಗೊಟಗೋಡಿಯಲ್ಲಿ ಭಾನುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ವಿಶ್ವದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ಚಕೋರ ಸಾಹಿತ್ಯ ವಿಚಾರ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಭಾಷಾ ಸಾಹಿತ್ಯ ಚಿಂತನೆ ಮನೆ, ಮನಗಳಿಗೆ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.
ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಇಂದಿನ ಹೊಸ ಪೀಳಿಗೆಗಳಿಂದ ಕಥೆ, ಕವನ, ಕಾವ್ಯಗಳು ಸ್ವಂತ ಶಕ್ತಿಯಿಂದ ಬರವಣಿಗೆ ರೂಪದಲ್ಲಿ ಹೊರ ಬರಬೇಕು. ಹೊಸಬರಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಮೂಲಕ ಯುವ ಕವಿಗಳಿಗೆ ಕವನ ವಾಚನ ತರಬೇತಿ ನೀಡುವುದು ಅಗತ್ಯವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಜಾವಿವಿ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಮಾತನಾಡಿ, ಕವಿ ಕಾವ್ಯ ರಚನೆಗೆ, ಯುವ ಸಾಹಿತಿಗಳ ಬರವಣಿಗೆಗೆ ಜಾನಪದ ವಿಶ್ವವಿದ್ಯಾಲಯ ಸದಾ ಬೆಂಬಲವಾಗಿ ನಿಂತಿದೆ. ಜನಪದ ಜ್ಞಾನ ಅನಾವರಣಕ್ಕೆ ಹೆಚ್ಚಿನ ಅವಕಾಶ ನೀಡುತ್ತಿದೆ.ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಾಹಿತ್ಯ ಅಕಾಡೆಮಿ ಸಂಚಾಲಕ ಮಲ್ಲಿಕಾರ್ಜುನ ಮಾನ್ಪಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಜಾವಿವಿ ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಸಾಹಿತಿ ಜುಬೇದಾ ನಾಯಕ, ರಂಗಕರ್ವಿು ಪ್ರಭು ಗುರಪ್ಪನವರ, ಇತರರಿದ್ದರು.