

ಕಲಾದಗಿ: ದಾಳಿಂಬೆ ಬೆಳೆಗೆ ತಗಲುವ ರೋಗದ ಕುರಿತು ವಿಜ್ಞಾನಿಗಳು ರೈತರಿಗೆ ಮಾರ್ಗದರ್ಶನ ನೀಡಿ ರೋಗ ಹತೋಟಿಗೆ ತರುವುದು ಅತಿ ಅಗತ್ಯವಾಗಿದೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಹಣ್ಣು ಬೆಳೆಗಾರರ ಸಂಘದ ಪ್ರೌಢಶಾಲಾ ಸಭಾ ಭವನದಲ್ಲಿ ಬಾಗಲಕೋಟೆ ತೋಟಗಾರಿಕೆ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ದಾಳಿಂಬೆ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಇಸ್ರೇಲಿಗೆ ಹೋದರೆ ಬೆಳೆಗಳಿಗೆ ರೋಗ ಬಾಧೆಯ ಸಮಸ್ಯೆ ಇರಲ್ಲ, ಅಲ್ಲಿನ ವಿಜ್ಞಾನಿಗಳು ಇವೆಲ್ಲವನ್ನೂ ಹೇಗೆ ಹತೋಟಿಗೆ ತರುತ್ತಿದ್ದಾರೆ ಎಂಬುವುದನ್ನು ತೋಟಗಾರಿಕೆ ವಿಜ್ಞಾನಿಗಳು ಅಧ್ಯಯನ ಮಾಡಬೇಕು. ಇಸ್ರೇಲ್ ಮಾದರಿ ಬೆಳೆ ಬೆಳೆದು ರೈತರು ಆರ್ಥಿಕ ಪ್ರಗತಿ ಹೊಂದುವಂತಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ತೋವಿವಿ ವಿಜ್ಞಾನಿಗಳು ದುಂಡಾಣು ರೋಗ ಹತೋಟಿ ಮತ್ತು ಶಾಶ್ವತ ನಿರ್ಮೂಲನೆ ಬಗ್ಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಬೇಕು ಎಂದರು.
ಹಲವು ರೈತರು ದಾಳಿಂಬೆ ಬೆಳೆಗೆ ತಗುಲುತ್ತಿರುವ ರೋಗ ಹಾಗೂ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಮಾತನಾಡಿ, ತೋಟಗಾರಿಕೆ ಅಧಿಕಾರಿಗಳ ವಿಜ್ಞಾನಿಗಳ ಗಮನ ಸೆಳೆದರು.
ಬಳಿಕ ಶಾಸಕರು ರೈತರ ಸಮಸ್ಯೆ ಆಲಿಸಿ, ತೋವಿವಿ ವಿಜ್ಞಾನಿಗಳು ರೈತರು ರೋಗ ಹತೋಟಿಗೆ ತರಲು ಅಗತ್ಯ ಮಾರ್ಗದರ್ಶನ ನೀಡಲು ಸೂಚಿಸಿದರಲ್ಲದೆ, ಹೀಗೇ ತೋಟಗಾರಿಕೆ ವಿಜ್ಞಾನಿಗಳು ನಿರ್ಲಕ್ಷ ವಹಿಸಿದರೆ ಎಲ್ಲ ರೈತರು ತೋವಿವಿ ಮುಂದೆ ಪ್ರತಿಭಟನೆ ಮಾಡುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣವರ್ಧನ್ ಮಾತನಾಡಿದರು.
ಸೊಲ್ಲಾಪುರದ ರಾಷ್ಟ್ರೀಯ ಸಂಶೋಧನಾ ಕೇಂದ್ರದ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಜ್ಯೋತ್ಸನಾ ಶರ್ಮಾ, ಗ್ರಾಪಂ ಅಧ್ಯಕ್ಷೆ ಖಾತುನಬಿ ರೋಣ, ಉಪಾಧ್ಯಕ್ಷ ಕೀರಪ್ಪ ಮಾದರ, ಬಾಗಲಕೋಟೆ ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ, ಬಾಗಲಕೋಟೆ ತಾಲೂಕು ತೋಟಗಾರಿಕೆ ಇಲಾಖಾ ಹಿರಿಯ ಸಹಾಯಕ ನಿರ್ದೇಶಕ ಬಸವರಾಜ ಗೌಡನವರ, ಸಹಾಯಕ ತೋಟಗಾರಿಕೆ ಅಧಿಕಾರಿ ಮಹಾಂತೇಶ ರಾಜೋಳಿ, ವಿಜಯಪುರ ತಿಡಗುಂದಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ. ಸಿದ್ದಣ್ಣ ಠೋಕೆ, ಬಾಗಲಕೋಟೆ ತೋವಿವಿ ಸಸ್ಯ ರೋಗ ಶಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ. ರಾಘವೇಂದ್ರ ಆಚಾರಿ, ಬಾಗಲಕೋಟೆ ತೋವಿವಿ ಕೀಟ ರೋಗ ಶಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಮನಗೌಡ ಎಸ್.ಎಚ್. ತೋವಿವಿ ಮಾರುಕಟ್ಟೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಪಾದ ವಿಶ್ವೇಶ್ವರ ಮತ್ತಿತರರಿದ್ದರು. ಎಂ.ಎ. ತೇಲಿ ನಿರೂಪಿಸಿ, ವಂದಿಸಿದರು.